Saturday, March 25, 2017

ನನ್ನ ಬೆನ್ನ ಹಿಂದಿನ ಗುರು ಪ್ರೊ. ಶ್ಯಾಮಸುಂದರ ಕೋಚಿ


ನಾನಾಗ ಕುಣಿಗಲ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿ.ಎಸ್ಸಿ. ಓದುತ್ತಿದ್ದೆ. ಶ್ಯಾಮಸುಂದರ ಕೋಚಿಯವರು ಕನ್ನಡ ರೀಡರ್ ಆಗಿದ್ದರು. ನಾನು ತಡವಾಗಿ ದಾಖಲಾಗಿದ್ದರಿಂದ ಲಂಕೇಶ್ ಅವರಗುಣಮುಖ ನಾಟಕವನ್ನು ಮುಕ್ಕಾಲುಭಾಗ ಮುಗಿಸಿದ್ದರು. ಕೊನೆಯಲ್ಲಿ ಒಂದು ಸೆಮಿನಾರ್ ಮಾಡೋಣವೆಂದು ಹೇಳಿ ನನಗೆ ಒಂದು ವಿಷಯವನ್ನು ಕೊಟ್ಟರು. ನಾನು ತಡವಾಗಿ ಕಾಲೇಜಿಗೆ ಸೇರಿದ್ದರಿಂದ ಅದಾಗಲೇ ಅಂಗಡಿಗಳಲ್ಲಿ ಪಠ್ಯಪುಸ್ತಕಗಳು ಮುಗಿದುಹೋಗಿದ್ದವು. ನಾನು ಪ್ರಬಂಧ ಬರೆಯುವ ಸಲುವಾಗಿ ಸಹಪಾಠಿಗಳ ಬಳಿ ಪುಸ್ತಕಕ್ಕಾಗಿ ಕೇಳಿದೆ. ಯಾರೂ ಕೊಡಲಿಲ್ಲ. ಕೋಚಿಯವರು ಅದುವರೆಗಿನ ಕಥೆಯನ್ನು ಸಿಂಹಾವಲೋಕನ ಕ್ರಮದಿಂದ ಹೇಳುತ್ತಿದ್ದುದರಿಂದ ನೆನಪಿನ ಆಧಾರದಿಂದ ಪ್ರಬಂಧವನ್ನು ಬರೆದೆ. ಮೂರ್ನಾಲ್ಕು ಹುಡುಗಿಯರು ಪ್ರಬಂಧ ಮಂಡಿಸಿದರು. ನಾನೂ ನನ್ನ ಪ್ರಬಂಧವನ್ನು ಓದಿದೆ. ಕೋಚಿಯವರುನಿಮ್ಮ ಪ್ರಬಂಧ solid ಆಗಿದೆ. ಶೈಲಿ ಚೆನ್ನಾಗಿದೆ. keep it up ಎಂದರು. ಒಮ್ಮೆ ನನ್ನನ್ನು ಹೊರತುಪಡಿಸಿ ನನ್ನ ತರಗತಿಯ ಯಾವ ವಿದ್ಯಾರ್ಥಿಯೂ ಕಾಲೇಜಿಗೆ ಬಂದಿರಲಿಲ್ಲ. ನಾನು ಕಾರಿಡಾರಿನಲ್ಲಿ ನಿಂತಿದ್ದೆ. ಕೋಚಿಯವರುಒಂದು ಪದ್ಯ ಚರ್ಚೆ ಮಾಡೋಣ ಬಾ ಎಂದರು. ನನಗೊಬ್ಬನಿಗೇ ತರಗತಿ ತೆಗೆದುಕೊಂಡರು. ಅಂದು ಕುವೆಂಪು ಅವರ 'ದೇವರು ರುಜು ಮಾಡಿದನು' ಕವಿತೆಯನ್ನು ಬೋಧಿಸಿದರು.

ಒಮ್ಮೆ ಸೂಚನಾ ಫಲಕದಲ್ಲಿ ವಿದ್ಯಾರ್ಥಿಗಳ ಕತೆ, ಕವನ ಇತ್ಯಾದಿಗಳನ್ನು ಪ್ರತಿಭಾಫಲಕದಲ್ಲಿ ಪ್ರಕಟಿಸಲಾಗುವುದೆಂದೂ, ಹೆಚ್ಚಿನ ವಿವರಗಳಿಗೆ ಶ್ಯಾಮಸುಂದರ ಕೋಚಿಯವರನ್ನು ಸಂಪರ್ಕಿಸುವುದೆಂದೂ ತಿಳಿಸಲಾಗಿತ್ತು. ನಾನು ನನ್ನ ಕವನವೊಂದನ್ನು ಕೋಚಿಯವರಿಗೆ ತೋರಿಸಿದೆ. ಓದಿ ನೋಡಿದ ಅವರುಚೆನ್ನಾಗಿದೆ. ಇನ್ನೂ ಕವನಗಳಿದ್ದರೆ ತನ್ನಿ ಎಂದರು. ಮರುದಿನ ಒಂದೆರಡು ಕವನಗಳನ್ನು ತೆಗೆದುಕೊಂಡುಹೋಗಿ ಕೊಟ್ಟೆ. ಒಂದು ದಿನ ಸಾರ್ವಜನಿಕ ಗ್ರಂಥಾಲಯದ ಕಡೆ ಹೋಗುತ್ತಿದ್ದೆ. ಎದುರಿನಿಂದ ಬರುತ್ತಿದ್ದ ಕೋಚಿಯವರುನಿನ್ನ ತಂದೆ ಏನು ಮಾಡುತ್ತಾರೆ?” ಎಂದರು. ನಾನುರೈತರು ಎಂದೆ. “ನಿನ್ನ ಕವನಗಳು ಚೆನ್ನಾಗಿವೆ. ಇನ್ನೊಂದಿಬ್ಬರ ಕವನಗಳನ್ನು ಸೇರಿಸಿ ಒಂದು ಕವನ ಸಂಕಲನ ತರೋಣ ಎಂದರು. ಇನ್ನೊಮ್ಮೆ ಕಾಲೇಜಿನಲ್ಲಿ ಇದೇ ವಿಷಯ ಪ್ರಸ್ತಾಪಿಸಿನಾನು ಒಂದು ಸಾವಿರ ರೂಪಾಯಿ ಹಾಕುತ್ತೇನೆ ಎಂದರು. ನಾನು ನನ್ನ ಪರಿಸ್ಥಿತಿ ವಿವರಿಸಿದೆ. ಕವನ ಸಂಕಲನ ಪ್ರಕಟಿಸುವ ತುರ್ತೂ ನನಗಿರಲಿಲ್ಲ. ನಂತರ ನಡೆದ ಕಾಲೇಜು ವಾರ್ಷಿಕೋತ್ಸವದಲ್ಲಿ ನನಗೆ ಕವನವೊಂದನ್ನು ಓದಲು ಅವಕಾಶ ಮಾಡಿಕೊಟ್ಟಿದ್ದರು.

ಕುಣಿಗಲ್ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿಜ್ಞಾನ ವಿಭಾಗ ಹೊಸದಾಗಿ ಆರಂಭವಾಗಿದ್ದರಿಂದ ಖಾಯಂ ಉಪನ್ಯಾಸಕರಿರಲಿಲ್ಲ. ವರ್ಷ ಅರೆಕಾಲಿಕ ಉಪನ್ಯಾಸಕರನ್ನು ನೇಮಿಸಿಕೊಳ್ಳಬಾರದೆಂದು ಸರ್ಕಾರ ಆದೇಶ ಹೊರಡಿಸಿತು. ವಿದ್ಯಾರ್ಥಿಗಳ ಸ್ಥಿತಿ ಡೋಲಾಯಮಾನವಾಯಿತು. ಒಂದು ದಿನ ಕಾಲೇಜಿನ ವಾಚನಾಲಯದಲ್ಲಿ ಪತ್ರಿಕೆ ಓದುತ್ತ ಕುಳಿತಿದ್ದೆ. ಕೋಚಿಯವರು ಬಾ ಎಂದು ಕರೆದರು. ನಾನು ಹಿಂಬಾಲಿಸಿದೆ. “ಬಿ.ಎಸ್ಸಿ. ಬಿಟ್ಟು ತುಮಕೂರಿನಲ್ಲಿ ಬಿ..ಗೆ ಸೇರಿಕೊ. ಆಪ್ಷನಲ್ ಇಂಗ್ಲಿಷ್ ತಗೊ. ಮಧ್ಯಾಹ್ನ ನಮ್ಮ ಮನೆಯಲ್ಲೇ ಊಟ ಮಾಡು ಎಂದು ಹೇಳಿದರು. ನನ್ನ ಮನೆ ಕಡೆ ಪರಿಸ್ಥಿತಿಯು ತುಂಬ ಕೆಟ್ಟದಾಗಿದ್ದುದರಿಂದ ನಾನು ಟಿ.ಸಿ.ಎಚ್. ಸೇರಬೇಕೆಂದಿರುವುದಾಗಿ ತಿಳಿಸಿದೆ. ಆಗ ಅವರುಹುಟ್ಟನ್ನು ಯಾವ ಮರದಿಂದ ಬೇಕಾದರೂ ಮಾಡಬಹುದು. ದೋಣಿ ಮಾಡುವ ಮರದಲ್ಲಿ ಹುಟ್ಟು ಮಾಡುವುದು ಬೇಡ ಎಂದರು. ನಮ್ಮ ಮನೆಯಲ್ಲಿ ಬೆಂಬಲಿಸುತ್ತಾರೆಂಬ ಭರವಸೆ ಇಲ್ಲದ ಕಾರಣ ನಾನು ಅವರ ಸಲಹೆಯಂತೆ ನಡೆಯಲಾಗಲಿಲ್ಲ. ಬಗ್ಗೆ ನನಗೆ ಇಂದೂ ವಿಷಾದವಿದೆ.

ನಾನು ದ್ವಿತೀಯ ಬಿ.ಎಸ್ಸಿ.ಯಲ್ಲಿದ್ದಾಗ ನನಗೆ ಟಿ.ಸಿ.ಎಚ್. ಸೀಟು ಸಿಕ್ಕಿತು. ಕೋಚಿಯವರಿಗೆ ವಿಷಯ ತಿಳಿಸಲು ಹೋದೆ. “ದುಡ್ಡು ಗಿಡ್ಡು ಏನಾದರೂ ಬೇಕಾಗಿತ್ತೇನು?” ಎಂದು ಕೇಳಿದರು. “ಎರಡು ಸಾವಿರ ರೂಪಾಯಿ ಬೇಕಾಗಿತ್ತು ಎಂದೆ. “ನಾಳೆ ತುಮಕೂರಿಗೆ ಬಾ ಕೊಡುತ್ತೇನೆ ಎಂದರು. ಮಾರನೆಯ ದಿನ ಹಣ ಕೊಟ್ಟು ಪ್ರತಿ ತಿಂಗಳು ನೂರು ರೂಪಾಯಿ ಕಳಿಸುವುದಾಗಿ ತಿಳಿಸಿದರು. ನನಗೆ ಮೈಸೂರಿನ ಡಯೆಟ್ನಲ್ಲಿ ಸೀಟು ಸಿಕ್ಕಿತ್ತು. ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರಾಗಿದ್ದ ಡಾ. ಕೆ. ಕೆಂಪೇಗೌಡ ಅವರಿಗೆ ಪತ್ರವೊಂದನ್ನು ಬರೆದುಕೊಟ್ಟರು. ಅಲ್ಲದೆ ಮಹಾರಾಜ ಕಾಲೇಜಿನ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದ ಪ್ರೊ. ಕೆ. ಎಸ್. ಭಗವಾನ್ ಅವರನ್ನೂ, ಯುವರಾಜ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥರಾಗಿದ್ದ ಡಾ. ವೈ.ಸಿ. ನಂಜುಂಡಯ್ಯನವರನ್ನೂ ಭೇಟಿ ಮಾಡಲು ತಿಳಿಸಿದರು. “ರಂಗಾಯಣದಲ್ಲಿ ನಾಟಕ ನೋಡು. ಆಕಾಶವಾಣಿಯಲ್ಲಿ ಭಾಷಣ ಮಾಡು ಎಂದು ಹೇಳಿದರಲ್ಲದೆ ರಂಗಾಯಣದ ಉಪನಿರ್ದೇಶಕರಾಗಿದ್ದ ವಾಲಿಯವರನ್ನು ಭೇಟಿ ಮಾಡಲು ತಿಳಿಸಿದರು. ಟಿ.ಸಿ.ಎಚ್. ಸೇರಿ ಮೂರು ತಿಂಗಳಾಗಿತ್ತು. ಡಾ. ವೈ.ಸಿ. ನಂಜುಂಡಯ್ಯನವರು ನಾನಿದ್ದ ಹಾಸ್ಟೆಲಿಗೆ ಬಂದು ಕೋಚಿಯವರು ಮುನ್ನೂರು ರೂಪಾಯಿ ಹಣವನ್ನು ಕಳಿಸಿರುವುದಾಗಿ ತಿಳಿಸಿ ಕೊಟ್ಟು ಹೋದರು. ನನಗೆ ತೊಂದರೆಯಾದಾಗ ಪತ್ರ ಬರೆದರೆ ನೂರು ರೂಪಾಯಿ ಕಳಿಸುತ್ತಿದ್ದರು. ನನಗೆ ಕೆಲಸ ಸಿಕ್ಕಿದ ಮೇಲೆ ಎರಡು ಸಾವಿರ ರೂಪಾಯಿಗಳನ್ನು ಕೊಡಲು ವರ ಮನೆಗೆ ಹೋದೆ. ಅವರು ತೆಗೆದುಕೊಳ್ಳಲು ನಿರಾಕರಿಸಿದರು

ಒಮ್ಮೆ ಅವರನ್ನು ಅವರ ಮನೆಯಲ್ಲಿ ಭೇಟಿ ಮಾಡಿ ಪ್ರೌಢಶಾಲಾ ಸಹಶಿಕ್ಷಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದೇನೆಂದು ಹೇಳಿದೆ. “ನೀನು ಹೈಸ್ಕೂಲ್ಗೆ ಹೋಗಬೇಡ. ನೆಟ್ ಎಕ್ಸಾಮ್ ತಗೋ ಎಂದರು. ಫೋನ್ ಮಾಡಿದಾಗಲೆಲ್ಲಾನಿನ್ನ ಎಂ.. ಎಲ್ಲಿಗೆ ಬಂತು?” ಎಂದು ಕೇಳುತ್ತಿದ್ದರು. ಅವರ ಒತ್ತಾಸೆಯೇ ನನ್ನ ಸಾಧನೆಗೆ ಸ್ಫೂರ್ತಿ.

-.ನಂ. ಜ್ಞಾನೇಶ್ವರ

No comments:

Post a Comment