ಪೂರ್ಣಚಂದ್ರ ತೇಜಸ್ವಿಯವರ ‘ಕಿರಗೂರಿನ ಗಯ್ಯಾಳಿಗಳು’ ಕಥಾಸಂಕಲನವನ್ನು ಓದಿದೆ. ಈ ಸಂಕಲನದಲ್ಲಿ ನಾಲ್ಕು ಕಥೆಗಳಿದ್ದು ‘ಕಿರಗೂರಿನ ಗಯ್ಯಾಳಿಗಳು’ ಹಾಗೂ ‘ಕೃಷ್ಣೆÃಗೌಡನ ಆನೆ’ ನೀಳ್ಗತೆಗಳಾಗಿವೆ. ‘ಕಿರಗೂರಿನ ಗಯ್ಯಾಳಿಗಳು’ ೫೫ ಪುಟಗಳಷ್ಟು ವಿಸ್ತಾರವಾಗಿದ್ದರೆ, ‘ಕೃಷ್ಣೆÃಗೌಡನ ಆನೆ’ ೩೫ ಪುಟಗಳಷ್ಟು ಹರಡಿಕೊಂಡಿದೆ. ‘ಕಿರಗೂರಿನ ಗಯ್ಯಾಳಿಗಳು’ ಕತೆಯ ನಾಟಕ ರೂಪಾಂತರ ರಂಗಸ್ಥಳದ ಮೇಲೆ ಅನೇಕ ಬಾರಿ ಪ್ರದರ್ಶಿತವಾಗಿದ್ದು ಇತ್ತಿÃಚೆಗೆ ಸುಮನಾ ಕಿತ್ತೂರು ಅವರ ನಿರ್ದೇಶನದಲ್ಲಿ ಸಿನಿಮಾ ಕೂಡ ಆಗಿದೆ. ಕಿರಗೂರಿನ ಗಂಡಸರು ಗ್ರಾಮಸೇವಕ ಶಂಕ್ರಪ್ಪನ ಚಿತಾವಣೆಯಿಂದ ಜಾತಿ ಜಗಳದಲ್ಲಿ ನಿರತರಾಗಿದ್ದರೂ, ಗಯ್ಯಾಳಿಗಳೆಂದೇ ಕುಖ್ಯಾತರಾಗಿದ್ದ ಕಿರಗೂರಿನ ಹೆಂಗಸರು ಜಾತಿಯ ಸೋಂಕನ್ನು ಅಂಟಿಸಿಕೊಳ್ಳದೆ, ನಾಗಮ್ಮನಿಗೆ ಭೂತ ಬಿಡಿಸಲು ಬಂದಿದ್ದ ಹೆಗ್ಡೆಗೇ ಭೂತ ಬಿಡಿಸಿ, ಶಂಕ್ರಪ್ಪನ ಶೇಂದಿ ಅಂಗಡಿಯನ್ನು ನೆಲಸಮ ಮಾಡಿ, ಊರ ಗಂಡಸರ ಜಾತಿ ಜಗಳಕ್ಕೂ ಮುಕ್ತಿ ಕಾಣಿಸುತ್ತಾರೆ. ‘ಕೃಷ್ಣೆÃಗೌಡನ ಆನೆ’ ಇಂಗ್ಲಿಷ್, ಹಿಂದಿ, ಮರಾಠಿ ಮತ್ತು ಮಲಯಾಳಂ ಭಾಷೆಗಳಿಗೆ ಅನುವಾದಗೊಂಡಿದೆ. ಆನೆಯೊಂದನ್ನು ಕೇಂದ್ರವಾಗಿಟ್ಟುಕೊಂಡು ಅರಣ್ಯ ಇಲಾಖೆ, ವಿದ್ಯುತ್ ಇಲಾಖೆ ಹಾಗೂ ಟೆಲಿಫೋನ್ ಇಲಾಖೆಗಳ ನಡುವಿನ ತಿಕ್ಕಾಟವನ್ನು ತೇಜಸ್ವಿ ಕಟ್ಟಿಕೊಟ್ಟಿದ್ದಾರೆ. ‘ಮಾಯಾಮೃಗ’ ಕತೆಯನ್ನು ರಾಷ್ಟçದ ಹತ್ತು ಅತ್ಯುತ್ತಮ ಕತೆಗಳಲ್ಲಿ ಒಂದೆಂದು ಪರಿಗಣಿಸಿ ‘ಕಥಾ ರಾಷ್ಟಿçÃಯ ಪ್ರಶಸ್ತಿ’ ನೀಡಲಾಗಿದೆ. ದೆವ್ವದ ಸತ್ಯಾಸತ್ಯತೆಯನ್ನು ಪತ್ತೆ ಮಾಡಲು ಸ್ಮಶಾನಕ್ಕೆ ಹೋದ ಇಬ್ಬರು ಯುವಕರನ್ನು ನಾಯಿಯೊಂದು ಹಿಂಬಾಲಿಸಿದಾಗ, ಆ ನಾಯಿಯೇ ದೆವ್ವವಾಗಿರಬಾರದೇಕೆ ಎಂಬ ಆಲೋಚನೆ ಆ ಯುವಕರ ಮನಸ್ಸಿನಲ್ಲಿ ಮೂಡುತ್ತದೆ. ಆ ನಾಯಿ ಯುವಕರನ್ನು ‘ಮಾಯಾಮೃಗ’ವಾಗಿ ಕಾಡುತ್ತದೆ. ಸೈಕಲ್ ಕಲಿಯಲು ಹೋದ ಹುಡುಗನೊಬ್ಬ ಬ್ಯಾಲೆನ್ಸ್ ತಪ್ಪಿ ದಢೂತಿ ಹೆಂಗಸೊಬ್ಬಳಿಗೆ ಢಿಕ್ಕಿ ಹೊಡೆದು ಕೆಳಗೆ ಬಿದ್ದು ಅವಳ ಸೀರೆ ಒಳಗೆ ತಲೆ ಎತ್ತುತ್ತಾ, ಕತ್ತಲು ಕವಿದಂತೆನಿಸಿ, ಪ್ರಪಂಚ ಎಲ್ಲ ತಲೆಕೆಳಗಾದಂತೆನಿಸಿ, ತಾನು ಪರಲೋಕದಲ್ಲಿದ್ದಂತೆನಿಸಿ, ಅಂದಿನಿಂದ ಯಾರಿಗೂ ಹೇಳಲಾರದ ರಹಸ್ಯ ವಿಶ್ವವೊಂದು ತನ್ನೊಳಗೇ ರೂಪುಗೊಳ್ಳತೊಡಗಿದ ಕತೆಯೇ ‘ರಹಸ್ಯ ವಿಶ್ವ’.
ಕಲಾವಿದ ಗುಜ್ಜಾರಪ್ಪನವರ ರೇಖಾಚಿತ್ರಗಳು ಪುಸ್ತಕದಲ್ಲಿ ಸೇರ್ಪಡೆಗೊಂಡಿವೆ. ‘ತಮ್ಮ ಆತ್ಮಗೌರವಕ್ಕಾಗಿ ಅವಿರತ ಹೋರಾಡುತ್ತಿರುವ ಎಲ್ಲ ಮಹಿಳೆಯರಿಗೆ’ ಈ
ಕೃತಿಯನ್ನು ಅರ್ಪಿಸಲಾಗಿದೆ. ೧೯೯೧ರಲ್ಲಿ ಮೊದಲ ಬಾರಿಗೆ ಪ್ರಕಟವಾಗಿರುವ ಈ ಕೃತಿ ೨೦೧೬ರಲ್ಲಿ ಇಪ್ಪತ್ತೆöÊದನೆಯ ಮುದ್ರಣ ಕಂಡಿದೆ. ೧೧೩ ಪುಟಗಳ ಈ ಕೃತಿಯ ಬೆಲೆ ೯೦ ರೂಪಾಯಿಗಳು. ಈ ಕೃತಿಯನ್ನು ಪುಸ್ತಕ ಪ್ರಕಾಶನ ಪ್ರಕಟಿಸಿದೆ.
-ತ. ನಂ. ಜ್ಞಾನೇಶ್ವರ
-ತ. ನಂ. ಜ್ಞಾನೇಶ್ವರ
No comments:
Post a Comment