Thursday, November 6, 2014

ಕುಲಕುಲಕುಲವೆಂದು ಹೊಡೆದಾಡದಿರಿ

ಕುಲಕುಲಕುಲವೆಂದು ಹೊಡೆದಾಡದಿರಿ
ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಬಲ್ಲಿರಾ

ಹುಟ್ಟದ ಯೋನಿಗಳಿಲ್ಲ ಮೆಟ್ಟದ ಭೂಮಿಗಳಿಲ್ಲ
ಅಟ್ಟು ಉಣ್ಣದ ವಸ್ತುಗಳಿಲ್ಲ
ಗುಟ್ಟು ಕಾಣಿಸಬಂತು ಹಿರಿದೇನು ಕಿರಿದೇನು
ನೆಟ್ಟನೆ ಸರ್ವಜ್ಞನ ನೆಲೆ ಕಂಡ್ಯ ಮನುಜ

ಜಲವೆ ಸಕಲ ಕುಲಕ್ಕೆ ತಾಯಲ್ಲವೆ
ಜಲದ ಕುಲವನೇನಾದರೂ ಬಲ್ಲಿರಾ
ಜಲದ ಬೊಬ್ಬುಳಿಯಂತೆ ಸ್ಥಿರವಲ್ಲವೀ ದೇಹ
ನೆಲೆಯ ಅರಿತು ನೀ ನೆನೆ ಕಂಡ್ಯ ಮನುಜ

ಹರಿಯೇ ಸರ್ವೋತ್ತಮ ಹರಿಯೇ ಸರ್ವೇಶ್ವರ
ಹರಿಮಯವೆಲ್ಲವೆನುತ ತಿಳಿದು
ಸಿರಿಕಾಗಿನೆಲೆಯಾದಿಕೇಶವರಾಯನ
ಚರಣಕಮಲವ ಕೀರ್ತಿಸುವನೆ ಕುಲಜ

- ಕನಕದಾಸರು 

Saturday, July 12, 2014

ಗೊರೂರು ರಾಮಸ್ವಾಮಿ ಅಯ್ಯಂಗಾರ್

ಪತ್ನಿ ಶೇಷಮ್ಮ ಅವರೊಂದಿಗೆ ಗೊರೂರು ರಾಮಸ್ವಾಮಿ ಅಯ್ಯಂಗಾರ್
ಕನ್ನಡದ ಪ್ರಮುಖ ಸಾಹಿತಿಗಳಲ್ಲಿ ಒಬ್ಬರಾದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಹಾಸನ ಜಿಲ್ಲೆಯ ಗೊರೂರಿನಲ್ಲಿ1904ರಲ್ಲಿ ಜನಿಸಿದರು. ತಂದೆ ಶ್ರೀನಿವಾಸ ಅಯ್ಯಂಗಾರ್; ತಾಯಿ ಲಕ್ಷ್ಮಮ್ಮ. ಅವರು ಎಂ.ಎ. ಪರೀಕ್ಷೆ ತೆಗೆದುಕೊಂಡಾಗ ಅವರೇ ರಚಿಸಿದ 'ನಮ್ಮ ಊರಿನ ರಸಿಕರು' ಕೃತಿ ಪಠ್ಯವಾಗಿತ್ತು. ಮಹಾತ್ಮ ಗಾಂಧೀಜಿಯವರ ಆತ್ಮಕಥೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. 'ಅಮೆರಿಕದಲ್ಲಿ ಗೊರೂರು' ಅವರ ಪ್ರವಾಸಕಥನ. ಲಲಿತ ಪ್ರಬಂಧಗಳನ್ನೂ ಬರೆದಿದ್ದಾರೆ. 60ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

Thursday, June 26, 2014

ವಾಲ್ಮೀಕಿ ಯಾರು?

ಪಟಿಯಾಲಾದಲ್ಲಿರುವ ಪಂಜಾಬ್ ಯೂನಿವರ್ಸಿಟಿಯ ವಾಲ್ಮೀಕಿ ಅಧ್ಯಯನ ಪೀಠದ ಚೇರ್‍ಮ್ಯಾನ್ ಆಗಿರುವ ಡಾ. ಮಂಜುಳಾ ಸಹದೇವ್ ಹೈಕೋರ್ಟ್‍ನ ಮುಂದೆ ಮಂಡಿಸಿದ ಅಂಶಗಳು ಹೀಗಿವೆ.

  • ಕ್ರಿ.ಶ. 9ನೇ ಶತಮಾನದವರೆಗಿನ ಯಾವುದೇ ವೈದಿಕ ಸಾಹಿತ್ಯದಲ್ಲೂ ಮಹರ್ಷಿ ವಾಲ್ಮೀಕಿಯವರು, 'ದರೋಡೆಕೋರ, ಡಕಾಯಿತ'ನಾಗಿದ್ದ ಎಂಬ ಉಲ್ಲೇಖ ಇಲ್ಲವೇ ಇಲ್ಲ.
  • ಕ್ರಿ.ಶ. 9ನೇ ಶತಮಾನದವರೆಗೆ 'ವಾಲ್ಮೀಕಿ' ಎಂಬ ಶಬ್ದದ ವ್ಯತ್ಪತ್ತಿ  (ವಲ್ಮೀಕ ಅಂದರೆ ಹುತ್ತದಿಂದ ಬಂದವ ಎಂಬ ಅರ್ಥ) ಎಲ್ಲೂ ಸಿಗುವುದಿಲ್ಲ.
  • ತನ್ನದೇ ಕೃತಿ 'ರಾಮಾಯಣ'ದಲ್ಲಿ ಆತ ಋಷಿ, ಮಹಾಋಷಿ ಭಗವಾನ್, ಮುನಿ ಅಂತ ಕರೆಸಿಕೊಳ್ಳುತ್ತಾನೆಯೇ ಹೊರತು, ಅಲ್ಲಿ ಢಕಾಯಿತ ಎಂಬ ಪ್ರಸಕ್ತಿಯೇ ಇಲ್ಲ.
  • ವಾಲ್ಮೀಕಿ ಬೇಡ, ವ್ಯಾಧ, ದರೋಡೆಕೋರನಾಗಿದ್ದ ಎಂಬ ಪ್ರಸ್ತಾಪವು ನಮಗೆ ಮೊದಲು ಸಿಗುವುದು 'ಸ್ಕಂಧಪುರಾಣ'ದಲ್ಲಿ. ಇದರ ಕಾಲಮಾನ ಅಂದಾಜು ಕ್ರಿ.ಶ. 10ನೇ ಶತಮಾನ.
  • "ಮರಾ ಮರಾ" ಎಂಬ ಮಂತ್ರದ ಬಗ್ಗೆ ಮೊತ್ತಮೊದಲ ಬಾರಿ ಹೇಳಲಾಗಿರುವುದು 'ಅಧ್ಯಾತ್ಮ ರಾಮಾಯಣ'ದಲ್ಲಿ (ಅಯೋಧ್ಯಾಕಾಂಡ-6.80-81). ಇದು ಕ್ರಿ.ಶ. 15ನೇ ಶತಮಾನದ್ದು.
  • ಅದೇ ರೀತಿ ಈ "ಮರಾ ಮರಾ" ಮಂತ್ರವು 'ಆನಂದ ರಾಮಾಯಣ'(ರಾಜ್ಯಕಾಂಡ-14.141)ದಲ್ಲಿ ಕಂಡುಬರುತ್ತದೆ. ಈ ಗ್ರಂಥದ ಕಾಲಮಾನ ಕ್ರಿ.ಶ. 16ನೇ ಶತಮಾನ.
- ಡಾ. ಅನಸೂಯ ಕೆಂಪನಹಳ್ಳಿ, 'ನಾಯಕ ಮಿತ್ರ', ಜೂನ್ 20 - ಜುಲೈ 05, 2014

Friday, April 4, 2014

ಹಳ್ಳಿ ಹಕ್ಕಿಯ ಹಾಡು


ಮಾಜಿ ಸಚಿವ ಎಚ್ ವಿಶ್ವನಾಥ್ ಅವರ ಆತ್ಮಕಥನ 'ಹಳ್ಳಿ ಹಕ್ಕಿಯ ಹಾಡು' ಓದಿದೆ.  ಈ ಕೃತಿ ಮಾಮೂಲಿ ಆತ್ಮಕತೆಯಾಗಿರದೆ, ಸಂವೇದನಾಶೀಲ ರಾಜಕಾರಣಿಯೊಬ್ಬನ ಸ್ವಗತದಂತಿದೆ. ವಿಶ್ವನಾಥ್ ಅವರು ವೈಯಕ್ತಿಕ ವಿಚಾರಗಳನ್ನು ಹೆಚ್ಚಾಗಿ ವಿವರಿಸದೆ ತಮ್ಮ ಸಾರ್ವಜನಿಕ ಜೀವನದ ಅನುಭವಗಳನ್ನು ದಾಖಲಿಸಿದ್ದಾರೆ. ಪುಸ್ತಕವು ಸ್ವಾರಸ್ಯಕರವಾಗಿದ್ದು ಸುಲಲಿತವಾಗಿದೆ.  ಅಲ್ಲಲ್ಲಿ ಡಿವಿಜಿಯವರ ಮಂಕುತಿಮ್ಮನ ಕಗ್ಗ, ಮರುಳ ಮುನಿಯನ ಕಗ್ಗ ಹಾಗೂ ಉಮರನ ಒಸಗೆಗಳಿಂದ ಆಯ್ದ ಪದ್ಯಗಳನ್ನು ಸಂದರ್ಭೋಚಿತವಾಗಿ ಉದಾಹರಿಸುತ್ತಾರೆ.
180 ಪುಟಗಳ ಈ ಪುಸ್ತಕವನ್ನು ಅಂಕಿತ ಪುಸ್ತಕ ಪ್ರಕಟಿಸಿದೆ. 2007ರಲ್ಲಿ ಪ್ರಕಟವಾಗಿರುವ ಈ ಕೃತಿಯ ಬೆಲೆ ರೂ. 125.

Thursday, April 3, 2014

ಜಾಹೀರಾತಿನಲ್ಲಿ ಕೋಮು ಸಾಮರಸ್ಯ

ಇಂದು ಟಿವಿಯಲ್ಲಿ ರೆಡ್ ಲೇಬಲ್ ಚಹಾದ ಜಾಹೀರಾತು ನೋಡಿದೆ. ಹಿಂದೂ ದಂಪತಿಗಳು ಮನೆಯ ಕೀ ಕಳೆದುಕೊಂಡಿದ್ದಾರೆ. ನೆರೆಮನೆಯ ಮುಸ್ಲಿಂ ಮಹಿಳೆ ಚಹಾ ಮಾಡುತ್ತೇನೆ ಬನ್ನಿ ಎಂದು ಆಹ್ವಾನಿಸುತ್ತಾಳೆ. ಮೊದಮೊದಲು ಹಿಂಜರಿದ ದಂಪತಿಗಳು ನಂತರ ಚಹಾದ ಪರಿಮಳದಿಂದ ಆಕರ್ಷಿತರಾಗಿ ಅವಳ ಮನೆಗೆ ಹೋಗುತ್ತಾರೆ.

Tuesday, April 1, 2014

ಹೋಳಿಗೆ


ಹೋಳಿಗೆ ಒಂದು ಸಿಹಿ ತಿಂಡಿ. 'ಒಬ್ಬಟ್ಟು' ಎಂತಲೂ ಕರೆಯುತ್ತಾರೆ. ಯುಗಾದಿ ಹಬ್ಬದಲ್ಲಿ ಹೋಳಿಗೆ ಮಾಡುತ್ತಾರೆ. ನಿಶ್ಚಿತಾರ್ಥಕ್ಕೂ ಹೋಳಿಗೆಗೂ ಬಿಡಿಸಲಾರದ ನಂಟು. ಬೇಳೆ ಒಬ್ಬಟ್ಟು, ಕಾಯಿ ಒಬ್ಬಟ್ಟು ಎಂಬ ಎರಡು ಬಗೆಗಳಿವೆ. ಬೇಳೆ ಒಬ್ಬಟ್ಟಿನ ಹೂರಣಕ್ಕೆ ತೊಗರಿ ಬೇಳೆ ಬಳಸುತ್ತಾರೆ. ಹಳೆ ಮೈಸೂರು ಕಡೆ ಕಾಯಿ ಹಾಲಿನ ಜೊತೆ ಕಲಸಿ ತಿನ್ನುತ್ತಾರೆ. ಉತ್ತರ ಕರ್ನಾಟಕದಲ್ಲಿ ಮಾವಿನ ಹಣ್ಣಿನ ಸೀಕರಣೆಯೊಂದಿಗೆ ಕಲಸಿ ತಿನ್ನುತ್ತಾರೆ.

Thursday, March 20, 2014

ಈ ಬಸವರಾಜು

ಈ ಬಸವರಾಜು ಕಳೆದ 25 ವರ್ಷಗಳಿಂದ ವಿಜ್ಞಾನ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಕಾರ್ಯಕರ್ತ. 'ಭಾರತ ಜನ ವಿಜ್ಞಾನ ಜಾಥಾ'ದಿಂದ ಪ್ರೇರಿತಗೊಂಡ ಅವರು ಮುಂದೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಘಟಕಗಳನ್ನು ಪ್ರಾರಂಭಿಸಿದರು. ನಂತರ 'ಭಾರತ ಜ್ಞಾನ ವಿಜ್ಞಾನ ಸಮಿತಿ'ಯ ಕರ್ನಾಟಕ ಶಾಖೆಯ ಪದಾಧಿಕಾರಿಯಾಗಿ ಸಕ್ರಿಯವಾಗಿ ತೊಡಗಿಸಿಕೊಂಡರು. ಇದೀಗ 'ಭಾರತ ಜ್ಞಾನ ವಿಜ್ಞಾನ ಸಮಿತಿ'ಯಿಂದ ಹೊರಬಂದಿರುವ ಅವರು 'ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ' ಎಂಬ ಹೊಸ ಸಂಘಟನೆಯನ್ನು ಕಟ್ಟಿದ್ದಾರೆ. 'ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ'ಯ ವತಿಯಿಂದ 'ಶಿಕ್ಷಣ ಶಿಲ್ಪಿ' ಎಂಬ ಶೈಕ್ಷಣಿಕ ಪತ್ರಿಕೆಯನ್ನು ಹೊರತರುತ್ತಿದ್ದಾರೆ. ಮಕ್ಕಳಿಗಾಗಿ 'ಪಟಾಕಿ' ಹಾಗೂ 'ಅಸಾಮಾನ್ಯರ ಜೀವನದ ಸ್ವಾರಸ್ಯಗಳು' ಎಂಬ ಪುಸ್ತಕಗಳನ್ನು ರಚಿಸಿರುವ ಅವರು 'ಡಾ. ಎಚ್. ಎಸ್. ದೊರೆಸ್ವಾಮಿ' ಎಂಬ ಕೃತಿಯನ್ನೂ ರಚಿಸಿದ್ದಾರೆ.

Monday, February 24, 2014

ತೇಜಸ್ವಿ ಮತ್ತು ಪ್ರಶಸ್ತಿ

  1. ತುಮಕೂರಿನ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಗಾದಿಗೆ ಇವರನ್ನು ತುಂಬ ಒತ್ತಾಯ ಮಾಡಿ ಕೇಳಿಕೊಂಡಿದ್ದರು. ಒಂದು press meetನಲ್ಲಿ ಹೇಳಿದ್ದು: ನಾನು ಸಾಹಿತ್ಯ ಸಮ್ಮೇಳನದ ಅಧ್ಯಕ್ಷನಾಗದೇ ಸಾಯುವವನು ಎಂದರು.
  2. ವಿವೇಕ ರೈರವರ ಕಾಲದಲ್ಲಿ ನಾಡೋಜ ಪ್ರಶಸ್ತಿ ನೀಡಲು ಎರಡೆರಡು ಸಲ ಒತ್ತಾಯ ಮಾಡಿದರು. ರೈಯವರು ಮನೆಗೇ ಬಂದು ಕೂತು ಕೇಳಿಕೊಂಡರು. ಇವರು ಸ್ವೀಕರಿಸಲೊಪ್ಪಲಿಲ್ಲ.
  3. ಮೈಸೂರು ವಿಶ್ವವಿದ್ಯಾನಿಲಯ 2004 ಜ. 22ರಂದು ನಡೆದ ಘಟಿಕೋತ್ಸವದಲ್ಲಿ ಆರ್.ಕೆ.ಲಕ್ಷ್ಮಣ್, ಎಚ್.ವೈ.ಶಾರದಾ ಪ್ರಸಾದ್, ಜಿ.ಎಸ್.ಶಿವರುದ್ರಪ್ಪ ಹಾಗೂ ತೇಜಸ್ವಿಗೂ ಗೌರವ ಡಾಕ್ಟರೇಟು ಕೊಡಲು ತೀರ್ಮಾನಿಸಿತ್ತು. ಆದರೆ ತೇಜಸ್ವಿ ಆ ಪದವಿಯನ್ನು ಸ್ವೀಕರಿಸಲು ನಿರಾಕರಿಸಿದರು.
  4. 2005ರಲ್ಲಿ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದವರೂ ಗೌರವ ಡಾಕ್ಟರೇಟು ಪದವಿ ಕೊಡುತ್ತೇವೆಂದರು. ಇವರು ಒಪ್ಪಿಕೊಳ್ಳಲಿಲ್ಲ.                                                          - ರಾಜೇಶ್ವರಿ, 'ನನ್ನ ತೇಜಸ್ವಿ' ಪು. 495-6