Thursday, October 31, 2013

ರಾಜ್ಯೋತ್ಸವ ಪ್ರಶಸ್ತಿ

2013ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟವಾಗಿದೆ. ಕೋ.ಚೆನ್ನಬಸಪ್ಪ ಅವರಿಗೆ ಅವರು ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ. ಪಿ.ಕಾಳಿಂಗರಾಯರೊಂದಿಗೆ ಹಾಡುತ್ತಿದ್ದ ಸೋಹನ್ ಕುಮಾರಿ ಅವರಿಗೆ ಇದೀಗ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ. ಸೂಲಗಿತ್ತಿ ನರಸಮ್ಮನವರಿಗೆ ರಾಷ್ಟ್ರೀಯ ಹಿರಿಯ ನಾಗರಿಕ ಪ್ರಶಸ್ತಿ ಬಂದ ನಂತರ ರಾಜ್ಯೋತ್ಸವ ಪ್ರಶಸ್ತಿ ಬಂದಿದೆ.
ಒಮ್ಮೆ ಎಂ.ಪಿ.ಪ್ರಕಾಶ್ ಅವರು ರಾಮಕೃಷ್ಣ ಹೆಗಡೆ ಅವರ ಬಳಿ ಕುವೆಂಪು ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಬಾರದಿರುವ ಸಂಗತಿಯನ್ನು ಪ್ರಸ್ತಾಪಿಸಿದರಂತೆ. ಆಗ ಹೆಗಡೆಯವರು, "ಯಾರಿಗೂ ಹೇಳಬೇಡಿ. ಈಗಾಗಲೇ ಅವರಿಗೆ ಎಂಥೆಂಥದೋ ಪ್ರಶಸ್ತಿಗಳೆಲ್ಲ ಬಂದಿವೆ. ಈಗ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಕೊಡುವುದು ಸರಿಯಾಗುವುದಿಲ್ಲ" ಎಂದರಂತೆ.

Wednesday, October 30, 2013

ಶಿಕ್ಷಕರ ನೇತ್ಯಾತ್ಮಕ ಮನೋಭಾವ

ವಿದ್ಯಾರ್ಥಿಯೊಬ್ಬ ತನ್ನ ಶಿಶ್ನದಿಂದ ಬಿಳಿ ದ್ರವ ಬರುತ್ತಿದೆ ಎಂದೂ, ತಾನು ವೈದ್ಯರ ಬಳಿ ಹೋಗಬೇಕೆಂದೂ ಶಿಕ್ಷಕರೊಬ್ಬರ ಬಳಿ ಹೇಳಿದ್ದಾನೆ. ಆ ಶಿಕ್ಷಕರು ಅವನ ಮುಗ್ಧತೆಯನ್ನು ಕಂಡು ನಗುತ್ತಿದ್ದರು. ಅವರಿಗೆ ಅದು ಗಂಭೀರ ವಿಷಯವಾಗಿ ಕಾಣಲಿಲ್ಲ. ಹಾಸ್ಯದ ವಸ್ತುವಿನಂತೆ ಕಂಡಿತು.

ಒಂದು ಹುಡುಗಿ ಶಾಲೆ ಬಿಟ್ಟಿದ್ದಳು. ಒಬ್ಬ ಶಿಕ್ಷಕರು ಹೇಳಿದರು, "ಆ ಹುಡುಗಿ ಶಾಲೆ ಬಿಟ್ಟದ್ದು ನನಗೆ ಖುಷಿ ಆಯಿತು!"

ಒಬ್ಬ ಹುಡುಗಿ ಅನೇಕ ಪ್ರಯತ್ನಗಳ ನಂತರ ಎಸ್‍ಎಸ್‍ಎಲ್‍ಸಿ ಪಾಸಾದಳು. ಒಬ್ಬ ಶಿಕ್ಷಕರೆಂದರು: "ಈ ಹುಡುಗಿ ಕಾಲೇಜಿಗೆ ಸೇರಿದರೆ ಮೂರು ಹುಡುಗರು ಫೇಲಾಗುತ್ತಾರೆ!"

ಶಾಲೆಯಲ್ಲಿ ಪ್ರಬಂಧ ಸ್ಪರ್ಧೆ ಏರ್ಪಡಿಸಿದ್ದೆ. ಒಬ್ಬ ಶಿಕ್ಷಕರೆಂದರು: "ಎಲ್ಲ ಹುಡುಗರಿಗೂ ಬರೆಯಲು ಹೇಳುತ್ತೀರಾ? ಸುಮ್ಮನೆ ಪೇಪರ್ ವೇಸ್ಟ್."

ಒಮ್ಮೆ ಪ್ರಾರ್ಥನಾ ಸಮಯದಲ್ಲಿ ಯಾರದೋ ಜನ್ಮದಿನವೆಂದು ಹೇಳುತ್ತಿದ್ದೆ. ಒಬ್ಬ ಶಿಕ್ಷಕರೆಂದರು: "ಇವಕ್ಕೆ ತಮ್ಮ ಜನ್ಮದಿನವೇ ಗೊತ್ತಿಲ್ಲ!"

ಶಾಲೆಯಲ್ಲಿ ಯಾವುದೋ ವಿಚಾರಕ್ಕೆ ತಂದೆ ತಾಯಿಗಳೇ ಮಗಳು ಯಾರನ್ನೋ ಪ್ರೀತಿಸಿದಳೆಂಬ ಕಾರಣಕ್ಕೆ ವರ್ಷಗಟ್ಟಲೆ ಕೂಡಿಹಾಕಿದ್ದ ವಿಚಾರ ಪ್ರಸ್ತಾಪಿಸಿದೆ. ಒಬ್ಬ ಶಿಕ್ಷಕರೆಂದರು: "ಅದರಲ್ಲೇನಿದೆ? ಮರ್ಯಾದೆ ಹೋಗುತ್ತೆ ಅಂತ ಕೂಡಿಹಾಕಿದ್ದಾರೆ."


ನಾಲ್ಕು ವರ್ಷದ ಹಿಂದೆ ಹುಡುಗ ಹುಡುಗಿ ಪ್ರೇಮಪತ್ರ ವಿನಿಮಯ ಮಾಡಿಕೊಂಡರು. ಶಿಕ್ಷಕರು ಕರೆದು ಬುದ್ಧಿ ಹೇಳಿದರು. ಅವರು ಒಬ್ಬರನ್ನೊಬ್ಬರು ಮರೆತೂ ಬಿಟ್ಟರು. ಆದರೆ ಶಿಕ್ಷಕರು ಪ್ರೇಮಪತ್ರಗಳನ್ನೋದುತ್ತ ಇನ್ನೂ ಚಪ್ಪರಿಸುತ್ತಲೇ ಇದ್ದಾರೆ.
 


Sunday, October 27, 2013

ಸೂರ್ಯಾಸ್ತ

ಇಂದು ತುರುವೇಕೆರೆಯ ಬಳಿಯಿರುವ ಬದರಿಕಾಶ್ರಮಕ್ಕೆ ಹೋಗಿದ್ದೆ. ಅಲ್ಲಿ ಸಂಸ್ಥಾಪಕರ ದಿನಾಚರಣೆಯನ್ನು ಆಚರಿಸಲಾಯಿತು. ಅಲ್ಲಿಂದ ಬರುತ್ತ ಸೂರ್ಯಾಸ್ತವನ್ನು ನೋಡಿದೆ. ಸೂರ್ಯಾಸ್ತ ನೋಡಿ ವರ್ಷಗಳೇ ಆಗಿತ್ತು.

ಕಥೆ ಕೇಳುವ ಹಂಬಲ

ಇಂದು ಬದರಿಕಾಶ್ರಮದಿಂದ ಒಂದೆರಡು ಪುಸ್ತಕಗಳನ್ನು ತಂದಿದ್ದೆ. ಅವುಗಳಲ್ಲಿ ಒಂದು 'ಮಕ್ಕಳ ರಾಮಕೃಷ್ಣ'. ಆ ಪುಸ್ತಕವನ್ನು ಓದಿ ಹೇಳುವಂತೆ ನನ್ನ ಮಗ(ಎರಡನೆಯ ತರಗತಿಯಲ್ಲಿ ಓದುತ್ತಿದ್ದಾನೆ) ದುಂಬಾಲು ಬಿದ್ದ. ಪುಸ್ತಕವನ್ನು ಪೂರ್ತಿ ಓದಿ ಹೇಳುವವರೆಗೂ ಬಿಡಲಿಲ್ಲ. ಅನುಪಮಾ ನಿರಂಜನ ಅವರ 'ದಿನಕ್ಕೊಂದು ಕಥೆ'ಯ ಹನ್ನೆರಡು ಸಂಪುಟಗಳನ್ನೂ ತಂದಿಟ್ಟಿದ್ದೇನೆ. ಅದರಲ್ಲಿಯ ಕಥೆಗಳನ್ನು ತನ್ನ ತಾಯಿಯಿಂದ ಆಗಾಗ ಓದಿಸಿಕೊಂಡು ಕೇಳುತ್ತಿರುತ್ತಾನೆ.

ಕನ್ನಡ ಪದಗಳ ಸರಿಯಾದ ರೂಪ

ಕನ್ನಡ ಪದಗಳನ್ನು ಬರೆಯುವಾಗ ಸಾಮಾನ್ಯವಾಗಿ ಮಾಡುವ ತಪ್ಪುಗಳು

ತಪ್ಪು ರೂಪ ಸರಿಯಾದ ರೂಪ

ಅನಾನುಕೂಲ     - ಅನನುಕೂಲ
ಅನಾವಶ್ಯಕ        - ಅನವಶ್ಯಕ
ಆಧ್ಯಾತ್ಮ            - ಅಧ್ಯಾತ್ಮ
ಉಪಹಾರ          - ಉಪಾಹಾರ
ಕೂಲಂಕುಷ        -  ಕೂಲಂಕಷ
ಕೋಟ್ಯಾನುಕೋಟಿ-ಕೋಟ್ಯನುಕೋಟಿ
ಜಯಂತ್ಯೋತ್ಸವ - ಜಯಂತ್ಯುತ್ಸವ
ಜಾತ್ಯಾತೀತ      -  ಜಾತ್ಯತೀತ
ತಲುಪು             -  ತಲಪು
ಧಾಳಿ                -  ದಾಳಿ
ಧೃಡ                -   ದೃಢ
ಮಾಂಸಹಾರಿ     -  ಮಾಂಸಾಹಾರಿ
ಭಾದೆ                -  ಬಾಧೆ
ಶಾಖಾಹಾರಿ       -  ಶಾಕಾಹಾರಿ
ಶುಭಾಷಯ        -  ಶುಭಾಶಯ
ಸಸ್ಯಹಾರಿ         -   ಸಸ್ಯಾಹಾರಿ

Wednesday, October 23, 2013

ಬರಗೂರರಿಗೆ 'ನೃಪತುಂಗ' ಪ್ರಶಸ್ತಿ

ಬರಗೂರು ರಾಮಚಂದ್ರಪ್ಪನವರು ನಾಡು ಕಂಡ ಪ್ರಖರ ಚಿಂತಕರಲ್ಲಿ ಒಬ್ಬರು. ಅವರನ್ನು 2013ನೇ ಸಾಲಿನ 'ನೃಪತುಂಗ' ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಸ್ಥಾಪಿಸಿರುವ 'ನೃಪತುಂಗ' ಪ್ರಶಸ್ತಿಯು ಏಳು ಲಕ್ಷದ ಒಂದು ರೂಪಾಯಿ ನಗದು ಹಾಗೂ ಸ್ಮರಣಿಕೆಯನ್ನು ಒಳಗೊಂಡಿದೆ.

ಜಿಡ್ಡು ಕೃಷ್ಣಮೂರ್ತಿ

ಇಂದು ಜಿಡ್ಡು ಕೃಷ್ಣಮೂರ್ತಿಯವರ ಬಗ್ಗೆ ಒಂದು ಪುಸ್ತಕ ಓದಿದೆ. ಸಂತೋಷ್ ಅನಂತಪುರ ಬರೆದಿರುವ ಕೃತಿಯನ್ನು ಬೆಂಗಳೂರಿನ ವಸಂತ ಪ್ರಕಾಶನವು 'ವಿಖ್ಯಾತರ ವ್ಯಕ್ತಿಚಿತ್ರ ಮಾಲೆ'ಯಲ್ಲಿ ಪ್ರಕಟಿಸಿದೆ. 75 ಪುಟಗಳಿರುವ ಈ ಪುಸ್ತಕದ ಬೆಲೆ ರೂ.35. ಒಳಪುಟಗಳಲ್ಲಿ ಕಪ್ಪು ಬಿಳುಪು ಛಾಯಾಚಿತ್ರಗಳಿವೆ.
ದಾರ್ಶನಿಕ ಜಿಡ್ಡು ಕೃಷ್ಣಮೂರ್ತಿ ಒಬ್ಬ ಮುಕ್ತ ಮನಸ್ಸಿನ ಚಿಂತಕ. ಅವರ ಕೆಲವು ನುಡಿಗಳು ಇಲ್ಲಿವೆ:
  1. ಸತ್ಯಕ್ಕೆ ದಾರಿಗಳಿಲ್ಲ. ಯಾವ ಪೂರ್ವನಿಶ್ಚಿತ ದಾರಿಯಿಂದಲೂ ಸತ್ಯದ ನೆಲೆ ತಲಪಲು ಸಾಧ್ಯವಿಲ್ಲ. ಯಾವುದೇ ಧರ್ಮ ಅಥವಾ ಸಿದ್ಧಾಂತ ನಮ್ಮನ್ನು ಅಲ್ಲಿಗೆ ಕೊಂಡೊಯ್ಯುವುದಿಲ್ಲ.
  2. ನಿನಗೆ ನೀನೇ ಬೆಳಕು.
  3. ಬದುಕನ್ನು ಅದು ಹೇಗಿದೆಯೋ ಹಾಗೆ ಸ್ವೀಕರಿಸಿದಾಗ ಮಾತ್ರ ಎಲ್ಲಾ ಸಂಘರ್ಷ-ದ್ವಂದ್ವಗಳು ಕೊನೆಗೊಳ್ಳಬಲ್ಲವು.

ಭದ್ರಗಿರಿ ಅಚ್ಯುತದಾಸರು ಇನ್ನಿಲ್ಲ

'ಕೀರ್ತನಕೇಸರಿ' ಸಂತ ಭದ್ರಗಿರಿ ಅಚ್ಯುತದಾಸರು ವಿಧಿವಶರಾಗಿದ್ದಾರೆ. 1997-98ರಲ್ಲಿ ಮೈಸೂರಿನಲ್ಲಿ ನಾನು ಐದು ಸಲ ಅವರ ಹರಿಕಥೆ ಕೇಳಿದ್ದೆ. ಆಕಾಶವಾಣಿಯಲ್ಲಿಯೂ ಅವರ ಹರಿಕಥೆಯನ್ನು ಅನೇಕ ಬಾರಿ ಕೇಳಿದ್ದೇನೆ. ಅವರ ಕೆಲವು ಕ್ಯಾಸೆಟ್ಟುಗಳು ನನ್ನ ಬಳಿ ಇವೆ. ಅವರದು ಮಧುರವಾದ ಕಂಠ. ಅವರ ಹರಿಕಥೆಗಳು ಪ್ರವಚನದಂತೆ ಇರುತ್ತಿದ್ದು ಅವರ ಪಾಂಡಿತ್ಯದ ದ್ಯೋತಕವಾಗಿದ್ದವು. ಅವರು ನನ್ನ ಅಚ್ಚುಮೆಚ್ಚಿನ ಹರಿಕಥಾ ವಿದ್ವಾಂಸರು. ಭದ್ರಗಿರಿ ಅಚ್ಯುತದಾಸರ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ:
https://kn.wikipedia.org/wiki/%E0%B2%AD%E0%B2%A6%E0%B3%8D%E0%B2%B0%E0%B2%97%E0%B2%BF%E0%B2%B0%E0%B2%BF_%E0%B2%85%E0%B2%9A%E0%B3%8D%E0%B2%AF%E0%B3%81%E0%B2%A4%E0%B2%A6%E0%B2%BE%E0%B2%B8%E0%B2%B0%E0%B3%81

Friday, October 18, 2013

ವಾಲ್ಮೀಕಿ ಜಯಂತಿ

ಇಂದು ವಾಲ್ಮೀಕಿ ಜಯಂತಿ. ವಾಲ್ಮೀಕಿ ಜಯಂತಿ ಆಚರಿಸುವುದಾದರೆ ವ್ಯಾಸ ಜಯಂತಿ ಏಕೆ ಬೇಡ? ಕನಕದಾಸ ಜಯಂತಿ ಆಚರಿಸುವುದಾದರೆ ಪುರಂದರದಾಸ ಜಯಂತಿ ಏಕೆ ಬೇಡ? ನೂರಾರು ಸಾಧು ಸಂತರು ಹುಟ್ಟಿರುವ ಈ ನಾಡಿನಲ್ಲಿ ಒಬ್ಬೊಬ್ಬರ ಜಯಂತಿಯನ್ನೂ ಸಾರ್ವಜನಿಕವಾಗಿ ಆಚರಿಸಬೇಕಾದ ಅನಿವಾರ್ಯತೆಯಾದರೂ ಏನಿದೆ? ವಿಚಾರ ಹಿನ್ನೆಲೆಗೆ ಸರಿದಾಗ ಆಚಾರ ಮುನ್ನೆಲೆಗೆ ಬರುತ್ತದೆ!