Saturday, April 9, 2016

ವಿವೇಕಾನಂದರ ಕ್ರಾಂತಿಕಾರಿ ವಿಚಾರಗಳು




ನಾನು ಇತ್ತೀಚೆಗೆ ಜ ಹೊ ನಾರಾಯಣಸ್ವಾಮಿಯವರ ‘ವಿವೇಕಾನಂದರ ಕ್ರಾಂತಿಕಾರಿ ವಿಚಾರಗಳು’ ಕೃತಿಯನ್ನು ಓದಿದೆ. ಜ ಹೊ ನಾರಾಯಣಸ್ವಾಮಿಯವರು ಸ್ವಾಮಿ ವಿವೇಕಾನಂದರ ‘ಕ್ರಾಂತಿಕಾರಿ’ ವಿಚಾರಗಳನ್ನು ಮೈಸೂರಿನ ಶ್ರೀ ರಾಮಕೃಷ್ಣಾಶ್ರಮವು 1974ರಲ್ಲಿ ಹತ್ತು ಸಂಪುಟಗಳಲ್ಲಿ ಪ್ರಕಟಿಸಿರುವ ‘ಸ್ವಾಮಿ ವಿವೇಕಾನಂದರ ಕೃತಿಶ್ರೇಣಿ’ಯಿಂದ ಆಯ್ದು ವಿವಿಧ ಶೀರ್ಷಿಕೆಗಳಡಿ ವಿಂಗಡಿಸಿಕೊಟ್ಟಿದ್ದಾರೆ. ಪ್ರತಿ ಉಲ್ಲೇಖವು ಯಾವ ಸಂಪುಟದ ಯಾವ ಪುಟದಲ್ಲಿದೆ ಎಂಬ ವಿವರವನ್ನು ಪುಸ್ತಕದ ಕೊನೆಯಲ್ಲಿ ನೀಡಿದ್ದಾರೆ. ಕೃತಿಯ ಆರಂಭದಲ್ಲಿ ಖ್ಯಾತ ವಿಮರ್ಶಕ ಪ್ರೊ.ಕೆ.ಎಸ್.ಭಗವಾನ್ ಅವರ ‘ಸ್ವಾಮಿ ವಿವೇಕಾನಂದ: ಶಕ್ತಿಯ ಸಂಕೇತ’ ಎಂಬ ಬರೆಹವಿದೆ. ನಾಲ್ಕನೆಯ ಮುದ್ರಣದಲ್ಲಿ ‘ಪೀಠಿಕೆ’ ಹಾಗೂ ‘ಸಂಕ್ಷಿಪ್ತ ಜೀವನ’ ಸೇರ್ಪಡೆಗೊಂಡಿವೆ. 1986ರಲ್ಲಿ ಮೊದಲ ಬಾರಿಗೆ ಪ್ರಕಟವಾಗಿರುವ ಈ ಕೃತಿ 2015ರಲ್ಲಿ ಆರನೆಯ ಮುದ್ರಣ ಕಂಡಿದೆ. “ವಿವೇಕಾನಂದರ ಕ್ರಾಂತಿಕಾರಿ ವಿಚಾರಗಳನ್ನು ಯುವಜನರು, ಹಿರಿಯರು ಹಳ್ಳಿಹಳ್ಳಿಗೂ ಮೂಲೆಮೂಲೆಗೂ ತಲುಪಿಸಬೇಕೆಂದು ಅವರಲ್ಲಿ ನನ್ನ ಕಳಕಳಿಯ ಪ್ರಾರ್ಥನೆ” ಎಂದು ಕುವೆಂಪು ಅವರು ತಮ್ಮ ‘ಹಾರೈಕೆ’ಯಲ್ಲಿ ತಿಳಿಸಿದ್ದಾರೆ. “ಯಾರ ದೇಹದ ದುಡಿತದಿಂದ ಮಾತ್ರ ಬ್ರಾಹ್ಮಣರ ಕೀರ್ತಿ, ಕ್ಷತ್ರಿಯರ ಪ್ರಾಬಲ್ಯ, ವೈಶ್ಯರ ಐಶ್ವರ್ಯ ಸಾಧ್ಯವಾಯಿತೊ ಅವರು ಎಲ್ಲಿ ಇರುವರು?” (ಪುಟ 37) ಎಂದು ವಿವೇಕಾನಂದರು ಪ್ರಶ್ನಿಸುತ್ತಾರೆ. “ಶೂದ್ರರು ಕೇವಲ ತಮ್ಮ ತಮ್ಮ ಶೂದ್ರತ್ವದಿಂದಲೇ ಮೇಲೇಳುವ ಒಂದು ಕಾಲ ಬರುವುದು” (ಪುಟ 39) ಎಂದು ಭವಿಷ್ಯ ನುಡಿಯುತ್ತಾರೆ. “ಪೌರೋಹಿತ್ಯವೇ ಭರತಖಂಡದ ವಿನಾಶಕ್ಕೆ ಕಾರಣ” (ಪುಟ 40) ಎಂದು ಘೋಷಿಸುತ್ತಾರೆ. “ಜನಸಾಮಾನ್ಯರನ್ನು ವಿದ್ಯಾವಂತರನ್ನಾಗಿ ಮಾಡಬೇಕು” (ಪುಟ 41) ಎಂದು ಸಲಹೆ ನೀಡುತ್ತಾರೆ. “ಇಷ್ಟೊಂದು ಮಂದಿ ಭಿಕ್ಷುಕರಿರುವ ಜನಾಂಗ ಪ್ರಪಂಚದಲ್ಲಿ ಮತ್ತೆಲ್ಲಿಯೂ ಇಲ್ಲ” (ಪುಟ 43) ಎಂದು ವಿಷಾದದಿಂದ ನುಡಿಯುತ್ತಾರೆ.“ ಉಪನಿಷತ್ತಿನ ತತ್ತವೆಲ್ಲ ರಾಜರ ಬುದ್ಧಿಯಿಂದ ಬಂದುದು, ಬ್ರಾಹ್ಮಣನಿಂದಲ್ಲ” (ಪುಟ 54) ಎಂದು ಹೇಳುತ್ತಾರೆ. “ವೇದಾಂತದ ಮಿದುಳು ಇಸ್ಲಾಮಿನ ದೇಹ ಇದೊಂದೇ ನಮ್ಮ ಪುರೋಗಮನಕ್ಕೆ ಹಾದಿ” (ಪುಟ 60) ಎನ್ನುತ್ತಾರೆ. “ಒಬ್ಬನು ಮಹಮ್ಮದೀಯನಾದ ತಕ್ಷಣ ಇಡೀ ಇಸ್ಲಾಂ ಪ್ರಪಂಚ ಅವನನ್ನು ತಮ್ಮ ಸಹೋದರನಂತೆ ಯಾವ ವ್ಯತ್ಯಾಸವನ್ನೂ ಮಾಡದೆ ಸ್ವೀಕರಿಸುವುದು. ಮತ್ತಾವ ಧರ್ಮವೂ ಹೀಗೆ ಮಾಡಲಾರದು” (ಪುಟ 65) ಎನ್ನುತ್ತಾರೆ. “ಭರತಖಂಡದಲ್ಲಿ ಮಹಮ್ಮದೀಯರ ವಿಜಯ ದೀನರಿಗೆ ದುರ್ಬಲರಿಗೆ ಮುಕ್ತಿಯಂತೆ ಬಂತು” (ಪುಟ 76) ಎಂದು ಹೇಳುತ್ತಾರೆ. 


-ತ. ನಂ. ಜ್ಞಾನೇಶ್ವರ

No comments:

Post a Comment