Saturday, January 9, 2021

ಇಂದಿನ ಕಾಲಕ್ಕೆ ಕುವೆಂಪು ಅವರ ವಿಚಾರಗಳ ಪ್ರಸ್ತುತತೆ

 

ಇಂದಿನ ಕಾಲಕ್ಕೆ ಕುವೆಂಪು ಅವರ ವಿಚಾರಗಳ ಪ್ರಸ್ತುತತೆ

ತ.ನಂ. ಜ್ಞಾನೇಶ್ವರ, ಸಹಾಯಕ ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಜಾಲಹಳ್ಳಿ-584116, ರಾಯಚೂರು ಜಿಲ್ಲೆ

ಮೊ.: 9164389346 ಇ-ಮೇಲ್:‌ gnaneswaratn@gmail.com

___________________________________________________________________________________

ಕುವೆಂಪು ಅವರು ಕನ್ನಡ ಸಾಹಿತ್ಯ ಕಂಡ ಮೇರು ಕವಿ. ವೈಚಾರಿಕತೆ ಅವರ ಸಾಹಿತ್ಯದ ಮುಖ್ಯ ಲಕ್ಷಣಗಳಲ್ಲಿ ಒಂದಾಗಿದೆ. ಯಾವ ವರ್ಗ ಅವರನ್ನು ʼದಂತಗೋಪುರದ ಕವಿʼ ಎಂದು ಬಿಂಬಿಸಲು ಪ್ರಯತ್ನಿಸಿತೋ ಆ ವರ್ಗಕ್ಕೆ ಇಲ್ಲದ ಸಾಮಾಜಿಕ ಕಳಕಳಿ ಕುವೆಂಪು ಅವರಲ್ಲಿ ಇತ್ತು ಎನ್ನುವುದು ಅವರ ಸಾಹಿತ್ಯವನ್ನು ಓದಿದ ಯಾರ ಅನುಭವಕ್ಕಾದರೂ ಬರುತ್ತದೆ. ಕುವೆಂಪು ಅವರ ವಿಚಾರಗಳು ಅಂದಿಗಿಂತ ಇಂದಿಗೇ ಹೆಚ್ಚು ಪ್ರಸ್ತುತವಾಗಿವೆ ಎನಿಸುತ್ತದೆ.

ಕುವೆಂಪು ಅವರು ʼಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿʼ ಎಂಬ ಕೃತಿಯ ಮುನ್ನುಡಿಯಲ್ಲಿ “ವಿವೇಕ ಮತ್ತು ವಿಚಾರದ ಹನನ ಯಜ್ಞವೆ ನಡೆಯಲು ಮೊದಲಾದಾಗ ʼವಿಚಾರವಾದʼ ಮತ್ತು ʼವೈಜ್ಞಾನಿಕ ದೃಷ್ಟಿʼಗಳನ್ನು ಕೇಳುವವರು ಯಾರು?” ಎಂದು ವಿಷಾದಪಡುತ್ತಾರೆ. ಮುಂದುವರಿದುಮತಾಂಧತೆ, ಮತಭ್ರಾಂತಿ, ಮತದ್ವೇಷ ಮತ್ತು ಮತಸ್ವಾರ್ಥತೆ ಇವು ʼವಿಚಾರವಾದʼ ಮತ್ತು ʼವೈಜ್ಞಾನಿಕ ದೃಷ್ಟಿʼಗಳಿಗೆ ಕೊಟ್ಟ ಪೆಟ್ಟಿನಿಂದ ಅವಕ್ಕೆ ಸೊಂಟ ಮುರಿದಂತಾಗಿ ತೆವಳಿಕೊಂಡು ಮುನ್ನಡೆಯುವಂತಾಗಿದೆ” ಎಂದು ಮರುಕಪಡುತ್ತಾರೆ. “ಸಂಸ್ಕೃತಿಯ ಹೆಸರಿನಲ್ಲಿ, ಮತದ ಹೆಸರಿನಲ್ಲಿ, ಧರ್ಮದ ಸೋಗಿನಲ್ಲಿ ಪೂರ್ವಿಕರ ಪ್ರಾಚೀನ ವೈಭವಗಳ ಕರ್ಮಕಾಂಡವನ್ನು ಮತ್ತೆ ಜೀರ್ಣೋದ್ಧಾರ ಮಾಡಿ ಪ್ರತಿಷ್ಠಾಪಿಸುವ ಸ್ವಾರ್ಥತಾ ಮೂಲವಾದ ಕುರುಡು ನೆವದಲ್ಲಿ, ಅವಿವೇಕ ಮೌಢ್ಯಗಳಿಗೆ ವೈಜ್ಞಾನಿಕತೆಯ ಮತ್ತು ವಿಚಾರದ ಚಿನ್ನದ ಮುಲಾಮು ಹಚ್ಚಿ ಜನರನ್ನು ದಿಕ್ಕು ತಪ್ಪಿಸಿ, ವಂಚಿಸುವ ಮಹೋದ್ಯೋಗ ನಿರ್ಲಜ್ಜೆಯಿಂದ ಸಾಗುತ್ತಿರುವುದನ್ನು ದಿನದಿನವೂ ನೋಡುತ್ತಿದ್ದೇವೆ. ಅಂತಹ ಆತ್ಮವಂಚನ ಮತ್ತು ಪರವಂಚನಕರವಾದ ಉದ್ಯೋಗ ಪ್ರಸಿದ್ಧರೂ ಪ್ರತಿಷ್ಠಿತರೂ ಆದ ಸ್ವಾರ್ಥಸಾಧಕ ವ್ಯಕ್ತಿಗಳಿಂದಲೆ ಪರಿಪೋಷಿತವಾಗುತ್ತಿರುವುದನ್ನು ನೋಡಿದರೆ ಈ ದೇಶದಲ್ಲಿ ವಿಜ್ಞಾನದ ಯಂತ್ರವಿದ್ಯೆಯಿಂದ ಪಂಚವಾರ್ಷಿಕ ಯೋಜನೆಗಳು ಮುಂದುವರಿದರೂ ವೈಜ್ಞಾನಿಕ ದೃಷ್ಟಿಯಾಗಲಿ ವಿಚಾರವಾದವಾಗಲಿ ವಿಜಯ ಪಡೆಯುವ ಕಾಲ ಹತ್ತಿರದಲ್ಲಿ ಎಲ್ಲಿಯೂ ಗೋಚರವಾಗುತ್ತಿಲ್ಲ” ಎಂದು ತಮ್ಮ ನಿರಾಶೆಯನ್ನು ವ್ಯಕ್ತಪಡಿಸುತ್ತಾರೆ. “ವೈಜ್ಞಾನಿಕ ದೃಷ್ಟಿ ಮತ್ತು ವಿಚಾರವಾದಗಳನ್ನು ಬೋಧಿಸಿ, ಪ್ರಚೋದಿಸಿ ಸಾಧಿಸುವ ಕಾರ್ಯ ಯಾವ ಸಂಸ್ಥೆಗಳಿಗೆ ಮೀಸಲಾಗಬೇಕೋ ಆ ಸಂಸ್ಥೆಗಳಲ್ಲಿಯೆ ಅದು ಅವಮಾನಿತವಾಗುತ್ತಿರುವುದು ಅತ್ಯಂತ ನಿರಾಶಾಜನಕವಾಗಿದೆ” ಎಂದು ಕುವೆಂಪು ವ್ಯಥೆಪಡುತ್ತಾರೆ.

“ನಮ್ಮ ರಾಜಕೀಯವಲಯದಲ್ಲಿಯೋ ಭವಿಷ್ಯನಿರ್ಣಯ ಮಾಡುವ ಜ್ಯೋತಿಷಿಗಳಿಗೆ ಪರಮಾಧಿಕಾರ ಲಭಿಸಿದಂತಾಗಿದೆ... ಮಂತ್ರಿ ತನ್ನ ರಾಜಕೀಯ ಭದ್ರತೆಯನ್ನು ಪ್ರಜಾಸತ್ತೆಯ ಋಜುನಿಯಮಗಳಿಂದ ಸ್ಥಾಪಿಸಿಕೊಳ್ಳುವ ʼಅಭದ್ರ ವಿಜ್ಞಾನʼಕ್ಕೆ ಬಿಟ್ಟುಕೊಡದೆ ಜ್ಯೋತಿಷಿಯ ʼಸುಭದ್ರ ಅಜ್ಞಾನʼಕ್ಕೇ ಶರಣು ಹೋಗುತ್ತಾನೆ. ಮಂತ್ರಿತ್ವ ವಹಿಸಿಕೊಳ್ಳುವ ಕಾಲನಿರ್ಣಯ ಮಾಡುವವನು ಜ್ಯೋತಿಷಿ. ಕೊನೆಗೆ ವಿಮಾನ ಏರುವ ಮುಹೂರ್ತ ಇಟ್ಟುಕೊಡುವವನೂ ಜ್ಯೋತಿಷಿ; ಕೊನೆಗೆ ವಿಮಾನ ಹಾರುವ ಸಮಯ ಗೊತ್ತು ಮಾಡುವುದೂ ಇವನ ಕೈಲಿರದಿದ್ದರೆ, ಜೋಯಿಸನ ʼನಿಮಿತ್ತʼಕ್ಕೆ ಶರಣಾಗಿ, ತನ್ನ ನಿವಾಸದಿಂದಾದರೂ ಆ ಸುಮೂರ್ತಕ್ಕೆ ಹೊರಡದಿದ್ದರೆ ಆತನ ಮನಸ್ಸಿಗೆ ನೆಮ್ಮದಿ ಇಲ್ಲ. ತನ್ನ ಅವಿವೇಕದಿಂದ ಏನಾದರೂ ಕೆಟ್ಟುದಾದರೆ, ಸರಿ, ಹೊರಟ ಗಳಿಗೆಯ ಮೇಲೆ ಹೊರೆ ಹೇರುತ್ತಾರೆ. ಅಧ್ಯಾಪಕ, ಅಧಿಕಾರಿ, ಮಂತ್ರಿ, ವ್ಯಾಪಾರಿ, ಮಠಾಧಿಪತಿ, ಶ್ರಮಜೀವಿ, ಕೂಲಿ, ಕೊನೆಗೆ ಕಳ್ಳ – ಎಲ್ಲರಲ್ಲಿಯೂ ಎಲ್ಲೆಲ್ಲಿಯೂ ಇಂತಹ ಅವೈಜ್ಞಾನಿಕತೆ ಮತ್ತು ಅವಿಚಾರತೆ ವ್ಯಾಪಿಸಿ ವರ್ಧಿಸುತ್ತಿರುವುದನ್ನು ಸಂಕಟದಿಂದ ನೋಡುತ್ತಿರಬೇಕಾಗಿದೆ[1]” ಎಂದು ತಮ್ಮ ವ್ಯಥೆಯನ್ನು ತೋಡಿಕೊಳ್ಳುತ್ತಾರೆ. ತಮ್ಮ ಉಪನ್ಯಾಸದಲ್ಲಿ “ಜನರ ಮೌಢ್ಯವನ್ನು ಬಂಡವಾಳವಾಗಿಸಿಕೊಂಡು ಹೊಟ್ಟೆಹೊರೆದುಕೊಳ್ಳುವವರನ್ನು ಕುರಿತು “ಯಾವ ರೂಪದಲ್ಲಿಯೆ ಆಗಲಿ, ಯಾವ ವೇಷದಲ್ಲಿಯೆ ಆಗಲಿ, ತಿಳಿದೂ ತಿಳಿದೂ ಮೂಢತನವನ್ನು ಆರಾಧಿಸಿ, ಬೋಧಿಸಿ, ಲಾಭ ಪಡೆಯುತ್ತ ನೆಮ್ಮದಿಯಾಗಿರುವವನು ಪಾಷಂಡಿಯಾಗುತ್ತಾನೆ[2]” ಎನ್ನುತ್ತಾರೆ.

ಅದೇ ಉಪನ್ಯಾಸದಲ್ಲಿ “ಚತುರ್ಮುಖ ಬ್ರಹ್ಮನೇ ಸಾಕ್ಷಾತ್ತಾಗಿ ಬಂದು, ನಾನೀಗ ನಿಮ್ಮೊಡನೆ ಮಾತಾಡುತ್ತಿರುವಂತೆ, ಋಷಿಗಳಿಗೆ ವೇದಗಳನ್ನು ಉಪನ್ಯಸಿಸಿದನು ಎಂದು ಹೇಳಿದರೆ, ಕಣ್ಣುಮುಚ್ಚಿಕೊಂಡು ನಂಬಬೇಡಿ. ಯಾವ ಕಾಲದಲ್ಲಿಯೋ ಯಾವ ಸಮಾಜಕ್ಕಾಗಿಯೋ ಮನು ಬರೆದಿಟ್ಟ ಕಟ್ಟಳೆಗಳು ಇಂದಿಗೂ ನಮ್ಮನ್ನಾಳಬೇಕೆಂದು ಹೇಳಿದರೆ ತಲೆದೂಗಿಬಿಡಬೇಡಿ.... ಆ ಗುರು, ಈ ಆಚಾರ್ಯ, ಆ ಧರ್ಮಶಾಸ್ತ್ರ, ಈ ಮನುಸ್ಮೃತಿ ಮೊದಲಾದುವು ಏನೇ ಹೇಳಲಿ; ಎಲ್ಲವನ್ನೂ ವಿಮರ್ಶಿಸುವ, ಪರೀಕ್ಷಿಸುವ, ಒರೆಗಲ್ಲಿಗೆ ಹಚ್ಚುವ ಹಕ್ಕು ನಮ್ಮದಾಗಿರುತ್ತದೆ.... ನಂಬುಗೆ ಪುರಾತನವಾದ ಮಾತ್ರಕ್ಕೆ ಸತ್ಯವಾದುದೆಂದು ಭಾವಿಸಬೇಡಿ[3]” ಎಂದು ಹೇಳುತ್ತಾರೆ. ತಮ್ಮ ಕವನವೊಂದರಲ್ಲಿ ಹೀಗೆ ಹೇಳುತ್ತಾರೆ:

ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?

ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?

ಎಂದೋ ಮನು ಬರೆದಿಟ್ಟುದಿಂದೆಮಗೆ ಕಟ್ಟೇನು?

ನಿನ್ನೆದೆಯ ದನಿಯೆ ಋಷಿ ! ಮನು ನಿನಗೆ ನೀನು !

 

ನೀರಡಿಸಿ ಬಂದ ಸೋದರಗೆ ನೀರನು ಕೊಡಲು

ಮನುಧರ್ಮಶಾಸ್ತ್ರವೆನಗೊರೆಯಬೇಕೇನು ?

ನೊಂದವನ ಕಂಬನಿಯನೊರಸಿ ಸಂತೈಸುವೊಡೆ

ಶಾಸ್ತ್ರ ಪ್ರಮಾಣವದಕಿರಲೆ ಬೇಕೇನು ?

 

ಪಂಚಮರ ಶಿಶುವೊಂದು ಕೆರೆಯಲ್ಲಿ ಮುಳುಗುತಿರೆ

ದಡದಲ್ಲಿ ಮೀಯುತ್ತಾ ನಿಂತಿರುವ ನಾನು

ಮುಟ್ಟಿದರೆ ಬ್ರಹ್ಮತ್ವ ಕೆಟ್ಟು ಹೋಗುವುದೆಂದು

ಸುಮ್ಮನಿದ್ದರೆ ಶಾಸ್ತ್ರ ಸಮ್ಮತವದೇನು?

 

ಹಿಂದಿನಾ ಋಷಿಗಳೂ ಮಾನವರೆ ನಮ್ಮಂತೆ,

ಅವರ ಶಾಸ್ತ್ರವು ಅವರ ಕಾಲಕ್ಕೆ ಮಾತ್ರ;

ಕಾಲಕ್ಕೆ ತಕ್ಕಂತೆ, ದೇಶಕ್ಕೆ ತಕ್ಕಂತೆ

ನಮ್ಮ ಹೃದಯವೇ ನಮಗೆ ಶ್ರೀಧರ್ಮಸೂತ್ರ !

 

ಅವರ ಬೆಂಗಳೂರು ವಿಶ್ವವಿದ್ಯಾಲಯದ ಘಟಿಕೋತ್ಸವ ಭಾಷಣ(ʼವಿಚಾರ ಕ್ರಾಂತಿಗೆ ಆಹ್ವಾನʼ)ದಲ್ಲಿ “ಚುನಾವಣೆಯ ರೀತಿಯನ್ನೆ ಬದಲಾಯಿಸದಿದ್ದರೆ ಮಾನಮರ್ಯಾದೆಯುಳ್ಳ ಯಾವ ಪ್ರಾಮಾಣಿಕ ಯೋಗ್ಯನೂ ಅದರಲ್ಲಿ ಪಾಲುಗೊಳ್ಳುವ ಸಂಭವವಿಲ್ಲ. ಹಣದ ಹೊಳೆ ಹರಿಸಿ ಚುನಾವಣೆಯಲ್ಲಿ ಗೆಲ್ಲುವ ಯಾವ ವ್ಯಕ್ತಿಯಾಗಲಿ ಯಾವ ಪಕ್ಷವಾಗಲಿ ಭ್ರಷ್ಟಾಚಾರಕ್ಕೆ ಬಲಿಯಾಗದೆ ಇರಲು ಸಾಧ್ಯವೆ ಇಲ್ಲ... ನಮ್ಮ ಪ್ರಜಾಸತ್ತೆ ಕಲುಷಿತವಾಗಲು ಹಣ ಒಂದೆಯೆ ಕಾರಣವೆಂದು ತಿಳಿಯುವುದು ತಪ್ಪಾಗುತ್ತದೆ. ಅದಕ್ಕಿಂತಲೂ ಮಹತ್ತಾದ ಮತ್ತು ಮೂಲಭೂತವಾದ ಮತ್ತೊಂದು ಕಾರಣವೂ ಇದೆ, ನಮ್ಮ ಪುಣ್ಯಭೂಮಿ ಭಾರತದಲ್ಲಿ! ಅದು ಒಂದು ಅಮೂರ್ತ ವಸ್ತು, ಅದು ಹಾಕಿಕೊಂಡಿರುವ ವೇಷದಿಂದ ತುಂಬ ಸಾಧು ಮತ್ತು ಪೂಜ್ಯ ಎಂಬಂತೆ ತೋರುತ್ತದೆ. ಅದು ಭಾವರೂಪಿಯಾದುದರಿಂದ ಅತಿ ಸೂಕ್ಷ್ಮವಾಗಿ ಹೃದಯಪ್ರವೇಶಮಾಡಿ ನಮ್ಮನ್ನು ಆಕ್ರಮಿಸುತ್ತದೆ.... ಅದರ ಹೆಸರು ʼಮತʼ! ಈ ಮತಭ್ರಾಂತಿಯಿಂದ ಲೋಕಕ್ಕೆ ಆಗಿರುವಷ್ಟು ಹಾನಿ ಮತ್ತಾವುದರಿಂದಲೂ ಆಗಿಲ್ಲ ಎಂದು ತೋರುತ್ತದೆ[4]” ಎನ್ನುತ್ತಾರೆ.

ʼಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿʼ ಉಪನ್ಯಾಸದಲ್ಲಿ “ಈಗ ನಾವು ಮತ ಎಂದು ಕರೆದುಕೊಳ್ಳುವ ಆಚಾರ ಸಮೂಹ ಬರಿಯ ಸಾಮಾಜಿಕವಾದ ಕಟ್ಟುಕಟ್ಟಳೆಗಳ ಕಾಟವಾಗಿದೆ. ಒಬ್ಬರನ್ನೊಬ್ಬರು ಮುಟ್ಟದಿರುವುದು, ನೋಡದಿರುವುದು; ಒಬ್ಬರೊಡನೊಬ್ಬರು ಕುಳಿತು ಭೋಜನ ಮಾಡದಿರುವುದು; ನಾಮ ಹಾಕಿಕೊಳ್ಳುವುದು; ವಿಭೂತಿ ಹಚ್ಚಿಕೊಳ್ಳುವುದು, ಮುದ್ರೆ ಹೊಡೆದುಕೊಳ್ಳುವುದು, ಶಿಲುಬೆ ಧರಿಸಿಕೊಳ್ಳುವುದು, ಕೆಲವರನ್ನು ಸಾರ್ವಜನಿಕವಾದ ಬಾವಿ ಕೆರೆಗಳಲ್ಲಿ ನೀರು ತೆಗೆದುಕೊಳ್ಳದಂತೆ ಮಾಡುವುದು; ಕೆಲವರನ್ನು ದೇವಸ್ಥಾನದೊಳಕ್ಕೆ ಸೇರಿಸದಿರುವುದು; ಮತ್ತೆ ಕೆಲವರನ್ನು ಗುಡಿಯೊಳಗೆ ಹತ್ತು ಮಾರು ಮಾತ್ರ ಬರಗೊಡಿಸುವುದು; ಹಾಗೆ ಬರಗೊಡಿಸಬೇಕೇ ಬೇಡವೇ ಎಂದು ಚರ್ಚೆ ನಡೆಸುವುದು; - ಇತ್ಯಾದಿ ಕೆಲಸಕ್ಕೂ ಬಾರದ, ಶ್ರೇಯಸ್ಕರವೂ ಅಲ್ಲದ ನೂರಾರು ಆಚಾರ ವ್ಯವಹಾರಗಳ ಸಮಷ್ಟಿಯೇ ನಮ್ಮ ಮತದ ಹುರುಳಾಗಿ ಕುಳಿತಿದೆ[5]” ಎನ್ನುತ್ತಾರೆ.

ಗೋಹತ್ಯೆಯ ಬಗ್ಗೆ ಕುವೆಂಪು ಹೀಗೆ ಹೇಳುತ್ತಾರೆ: “ಗೋಹತ್ಯೆಯನ್ನು ಉಗ್ರವಾಗಿ ಮತೀಯವಾಗಿ ಪ್ರತಿಪಾದಿಸುತ್ತಿರುವವರು ತಿಳಿಯರು, ವೇದದ ಕಾಲದಲ್ಲಿ ಗೋಹತ್ಯೆ ಮಂತ್ರಪೂತವಾಗಿಯೇ ನಡೆದಿತ್ತು ಎಂಬುದನ್ನು, ಮಂತ್ರವತ್ತಾಗಿಯೇ ನಡೆದಿತ್ತು ಎಂಬುದನ್ನು[6].

ತಮ್ಮ ಒಂದು ಕವನದಲ್ಲಿ ಕೆಳಕಂಡಂತೆ ಕರೆಕೊಡುತ್ತಾರೆ:


ಗುಡಿ ಚರ್ಚು ಮಸಜೀದಿಗಳ ಬಿಟ್ಟು ಹೊರಬನ್ನಿ,

ಬಡತನವ ಬುಡಮಟ್ಟ ಕೀಳಬನ್ನಿ.

ಮೌಢ್ಯತೆಯ ಮಾರಿಯನು ಹೊರದೂಡಲೈತನ್ನಿ,

ವಿಜ್ಞಾನ ದೀವಿಗೆಯ ಹಿಡಿಯ ಬನ್ನಿ.

ಓ, ಬನ್ನಿ, ಸೋದರರೆ, ಬೇಗ ಬನ್ನಿ!

 

ಸಿಲುಕದಿರಿ ಮತವೆಂಬ ಮೋಹದಜ್ಞಾನಕ್ಕೆ;

ಮತಿಯಿಂದ ದುಡಿಯಿರೈ ಲೋಕಹಿತಕೆ.

ಮತದ ಮತದ ಹಳೆಮತದ ಸಹವಾಸ

ಸಾಕಿನ್ನು ಸೇರಿರೈ ಮನುಜ ಮತಕೆ:

ಓ, ಬನ್ನಿ, ಸೋದರರೆ, ವಿಶ್ವಪಥಕೆ!


“ಸಮಾಜವಾದದ ಪ್ರಜಾಸತ್ತೆ ನಿಮ್ಮ ಗುರಿಯಾಗಿದ್ದರೆ ಮತಭಾವನೆಯ ಶನಿಸಂತಾನವಾದ ಜಾತಿಪದ್ಧತಿಯ ಸಂಪೂರ್ಣ ವಿನಾಶಕ್ಕೆ ನೀವು ಕಂಕಣ ಕಟ್ಟಿಕೊಂಡು ಹೋರಾಡಬೇಕು[7]” ಎನ್ನುತ್ತಾರೆ ಕುವೆಂಪು. ಅವರು ತಮ್ಮ ವಿಶ್ವಮಾನವ ಸಂದೇಶದಲ್ಲಿ “ಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ ಈ ಪಂಚಮಂತ್ರ ಇನ್ನು ಮುಂದಿನ ದೃಷ್ಟಿಯಾಗಬೇಕಾಗಿದೆ[8]” ಎಂದು ಹೇಳುತ್ತಾರೆ.

ತ್ರಿಭಾಷಾ ಸೂತ್ರದ ಕುರಿತು ಕುವೆಂಪು ಅವರು ಹೀಗೆ ಹೇಳುತ್ತಾರೆ: “ನಮಗೆ ಬೇಕಾದುದು ತ್ರಿಭಾಷಾ ಸೂತ್ರವಲ್ಲ ದ್ವಿಭಾಷಾ ಸೂತ್ರ: ಅಂದರೆ ʼಬಹುಭಾಷೆಗಳಲ್ಲಿ ದ್ವಿಭಾಷೆʼ ಎಂಬುದೇ ನಮಗಿಂದು ಅತ್ಯಂತ ಕ್ಷೇಮಕರವೂ ಲಾಭದಾಯಕವೂ ಆದ ಸೂತ್ರ. ನಮ್ಮ ವಿದ್ಯಾರ್ಥಿಗಳ ಮುಂದೆ ಅನೇಕ ಭಾಷೆಗಳನ್ನಿರಿಸಿ, ಯಾವುದಾದರೂ ಎರಡು ಭಾಷೆಗಳನ್ನು ಆರಿಸಿಕೊಳ್ಳುವ ಸ್ವಾತಂತ್ರ್ಯವನ್ನು ಅವರಿಗೇ ಕೊಡಬೇಕು[9].”

ಮದ್ಯಪಾನದ ಬಗ್ಗೆ ಕುವೆಂಪು ಹೇಳುವುದು ಹೀಗೆ: “ಮದ್ಯಪಾನದಿಂದ ಮನುಷ್ಯನಿಗೆ ತಾತ್ಕಾಲಿಕ ಉತ್ಸಾಹ ಉಲ್ಲಾಸಗಳು ತೋರಿಬಂದರೂ ಪರಿಣಾಮದಲ್ಲಿ ಅದು ಅನರ್ಥಕಾರಿ. ದೇಹವನ್ನು ನಿರ್ವೀರ್ಯವನ್ನಾಗಿಯೂ ಮನಸ್ಸನ್ನು ನಿಸ್ತೇಜವನ್ನಾಗಿಯೂ ಮಾಡಿ ಆತ್ಮನಾಶಗೈಯುತ್ತದೆ[10].

ಕುವೆಂಪು ಅವರು ಮೂಢನಂಬಿಕೆಗಳನ್ನು ನಿರಾಕರಿಸುತ್ತಾರೆ. ಮತಾಂಧತೆ, ಮತಭ್ರಾಂತಿ, ಮತದ್ವೇಷಗಳನ್ನು ಖಂಡಿಸುತ್ತಾರೆ. ವಿಚಾರವಾದ ಮತ್ತು ವೈಜ್ಞಾನಿಕ ದೃಷ್ಟಿಗಳನ್ನು ಬೆಂಬಲಿಸುತ್ತಾರೆ. ಯಾವ ಕಾಲದಲ್ಲಿಯೋ ಬರೆದಿಟ್ಟ ಶಾಸ್ತ್ರಗಳನ್ನು ವಿಮರ್ಶಿಸುವ, ಪರೀಕ್ಷಿಸುವ, ಒರೆಗಲ್ಲಿಗೆ ಹಚ್ಚುವ ಹಕ್ಕು ನಮ್ಮದಾಗಿರುತ್ತದೆ ಎನ್ನುತ್ತಾರೆ. ಪ್ರಜಾಸತ್ತೆ ಕಲುಷಿತವಾಗಲು ಕಾರಣವಾಗಿರುವ ಭ್ರಷ್ಟಾಚಾರ, ಜಾತಿ, ಮತಗಳನ್ನು ವರ್ಜಿಸಲು ಕರೆ ಕೊಡುತ್ತಾರೆ. ಅವರ ವಿಚಾರಗಳು ಎಂದಿಗಿಂತ ಇಂದು ಹೆಚ್ಚು ಪ್ರಸ್ತುತವಾಗಿವೆ ಎಂಬುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ.

(ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ, ಇವರು ನಡೆಸಿದ ಪ್ರಬಂಧ ಸ್ಪರ್ಧೆಯಲ್ಲಿ ಸಾರ್ವಜನಿಕ ವಿಭಾಗದಲ್ಲಿ ಎರಡನೆಯ ಬಹುಮಾನ ಪಡೆದ ಪ್ರಬಂಧ. ಕೊನೆಯ ಪ್ಯಾರಾವನ್ನು ನಂತರ ಸೇರಿಸಲಾಗಿದೆ.) 



[1] ಕುವೆಂಪು, ಮುನ್ನುಡಿ, ʼಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿʼ, ಉದಯರವಿ ಪ್ರಕಾಶನ, ಮೈಸೂರು, ಏಳನೆಯ ಮುದ್ರಣ, ೧೯೯೮

[2] ಕುವೆಂಪು, ʼಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿʼ, ಉದಯರವಿ ಪ್ರಕಾಶನ, ಮೈಸೂರು, ಏಳನೆಯ ಮುದ್ರಣ, ೧೯೯೮, ಪು. ೩

[3] ಅದೇ

[4] ಕುವೆಂಪು, ʼವಿಚಾರ ಕ್ರಾಂತಿಗೆ ಆಹ್ವಾನʼ, ಉದಯರವಿ ಪ್ರಕಾಶನ, ಮೈಸೂರು, ನಾಲ್ಕನೆಯ ಮುದ್ರಣ, ೨೦೦೪, ಪು. ೫-೬

[5] ಕುವೆಂಪು, ʼಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿʼ, ಉದಯರವಿ ಪ್ರಕಾಶನ, ಮೈಸೂರು, ಏಳನೆಯ ಮುದ್ರಣ, ೧೯೯೮, ಪು. ೨

[6] ಕುವೆಂಪು, ʼಮನುಜಮತ ವಿಶ್ವಪಥʼ, ಉದಯರವಿ ಪ್ರಕಾಶನ, ಮೈಸೂರು, ಐದನೆಯ ಮುದ್ರಣ, ೧೯೯೭, ಪು. ೨೪

[7] ಕುವೆಂಪು, ʼವಿಚಾರ ಕ್ರಾಂತಿಗೆ ಆಹ್ವಾನʼ, ಉದಯರವಿ ಪ್ರಕಾಶನ, ಮೈಸೂರು, ನಾಲ್ಕನೆಯ ಮುದ್ರಣ, ೨೦೦೪, ಪು. ೬

[8] ಕುವೆಂಪು, ʼಕೊನೆಯ ತೆನೆ ಮತ್ತು ವಿಶ್ವಮಾನವ ಸಂದೇಶʼ, ಉದಯರವಿ ಪ್ರಕಾಶನ, ಮೈಸೂರು, ಮೂರನೆಯ ಮುದ್ರಣ, ೧೯೯೮, ಪು. 20

[9] ಕುವೆಂಪು, ʼವಿಚಾರ ಕ್ರಾಂತಿಗೆ ಆಹ್ವಾನʼ, ಉದಯರವಿ ಪ್ರಕಾಶನ, ಮೈಸೂರು, ನಾಲ್ಕನೆಯ ಮುದ್ರಣ, ೨೦೦೪, ಪು. 97

 

[10] ಕುವೆಂಪು, ʼಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿʼ, ಉದಯರವಿ ಪ್ರಕಾಶನ, ಮೈಸೂರು, ಏಳನೆಯ ಮುದ್ರಣ, ೧೯೯೮, ಪು. ೧೫

No comments:

Post a Comment