Friday, April 4, 2014

ಹಳ್ಳಿ ಹಕ್ಕಿಯ ಹಾಡು


ಮಾಜಿ ಸಚಿವ ಎಚ್ ವಿಶ್ವನಾಥ್ ಅವರ ಆತ್ಮಕಥನ 'ಹಳ್ಳಿ ಹಕ್ಕಿಯ ಹಾಡು' ಓದಿದೆ.  ಈ ಕೃತಿ ಮಾಮೂಲಿ ಆತ್ಮಕತೆಯಾಗಿರದೆ, ಸಂವೇದನಾಶೀಲ ರಾಜಕಾರಣಿಯೊಬ್ಬನ ಸ್ವಗತದಂತಿದೆ. ವಿಶ್ವನಾಥ್ ಅವರು ವೈಯಕ್ತಿಕ ವಿಚಾರಗಳನ್ನು ಹೆಚ್ಚಾಗಿ ವಿವರಿಸದೆ ತಮ್ಮ ಸಾರ್ವಜನಿಕ ಜೀವನದ ಅನುಭವಗಳನ್ನು ದಾಖಲಿಸಿದ್ದಾರೆ. ಪುಸ್ತಕವು ಸ್ವಾರಸ್ಯಕರವಾಗಿದ್ದು ಸುಲಲಿತವಾಗಿದೆ.  ಅಲ್ಲಲ್ಲಿ ಡಿವಿಜಿಯವರ ಮಂಕುತಿಮ್ಮನ ಕಗ್ಗ, ಮರುಳ ಮುನಿಯನ ಕಗ್ಗ ಹಾಗೂ ಉಮರನ ಒಸಗೆಗಳಿಂದ ಆಯ್ದ ಪದ್ಯಗಳನ್ನು ಸಂದರ್ಭೋಚಿತವಾಗಿ ಉದಾಹರಿಸುತ್ತಾರೆ.
180 ಪುಟಗಳ ಈ ಪುಸ್ತಕವನ್ನು ಅಂಕಿತ ಪುಸ್ತಕ ಪ್ರಕಟಿಸಿದೆ. 2007ರಲ್ಲಿ ಪ್ರಕಟವಾಗಿರುವ ಈ ಕೃತಿಯ ಬೆಲೆ ರೂ. 125.

Thursday, April 3, 2014

ಜಾಹೀರಾತಿನಲ್ಲಿ ಕೋಮು ಸಾಮರಸ್ಯ

ಇಂದು ಟಿವಿಯಲ್ಲಿ ರೆಡ್ ಲೇಬಲ್ ಚಹಾದ ಜಾಹೀರಾತು ನೋಡಿದೆ. ಹಿಂದೂ ದಂಪತಿಗಳು ಮನೆಯ ಕೀ ಕಳೆದುಕೊಂಡಿದ್ದಾರೆ. ನೆರೆಮನೆಯ ಮುಸ್ಲಿಂ ಮಹಿಳೆ ಚಹಾ ಮಾಡುತ್ತೇನೆ ಬನ್ನಿ ಎಂದು ಆಹ್ವಾನಿಸುತ್ತಾಳೆ. ಮೊದಮೊದಲು ಹಿಂಜರಿದ ದಂಪತಿಗಳು ನಂತರ ಚಹಾದ ಪರಿಮಳದಿಂದ ಆಕರ್ಷಿತರಾಗಿ ಅವಳ ಮನೆಗೆ ಹೋಗುತ್ತಾರೆ.

Tuesday, April 1, 2014

ಹೋಳಿಗೆ


ಹೋಳಿಗೆ ಒಂದು ಸಿಹಿ ತಿಂಡಿ. 'ಒಬ್ಬಟ್ಟು' ಎಂತಲೂ ಕರೆಯುತ್ತಾರೆ. ಯುಗಾದಿ ಹಬ್ಬದಲ್ಲಿ ಹೋಳಿಗೆ ಮಾಡುತ್ತಾರೆ. ನಿಶ್ಚಿತಾರ್ಥಕ್ಕೂ ಹೋಳಿಗೆಗೂ ಬಿಡಿಸಲಾರದ ನಂಟು. ಬೇಳೆ ಒಬ್ಬಟ್ಟು, ಕಾಯಿ ಒಬ್ಬಟ್ಟು ಎಂಬ ಎರಡು ಬಗೆಗಳಿವೆ. ಬೇಳೆ ಒಬ್ಬಟ್ಟಿನ ಹೂರಣಕ್ಕೆ ತೊಗರಿ ಬೇಳೆ ಬಳಸುತ್ತಾರೆ. ಹಳೆ ಮೈಸೂರು ಕಡೆ ಕಾಯಿ ಹಾಲಿನ ಜೊತೆ ಕಲಸಿ ತಿನ್ನುತ್ತಾರೆ. ಉತ್ತರ ಕರ್ನಾಟಕದಲ್ಲಿ ಮಾವಿನ ಹಣ್ಣಿನ ಸೀಕರಣೆಯೊಂದಿಗೆ ಕಲಸಿ ತಿನ್ನುತ್ತಾರೆ.