ಹೋಗುತಿದೆ ಹಳೆಕಾಲ, ಹೊಸಕಾಲ ಬರುತಲಿದೆ,
ಬರುತಲಿದೆ ಹೊಸ ದೃಷ್ಟಿ ಹೊಸ ಬಯಕೆಗಳಲಿ.
ಹೋಗುತಿದೆ ಹಳೆಬಾಳು, ಹೊಸಬಾಳು ಬರುತಲಿದೆ,
ಬರುತಲಿದೆ ಕುದಿಗೊಂಡು ತರುಣರೆದೆಗಳಲಿ.
ತರುಣರಿರ, ಎದ್ದೇಳಿ! ಎಚ್ಚರಗೊಳ್ಳಿ! ಕೇಳಿ!
ಬೀಸುತಿದೆ ಪಶ್ಚಿಮದ ರಸಪೂರ್ಣ ಹೊಸ ಗಾಳಿ
ಭಾರತದ ಬಣಗು ಬಾಳ್ಮರವನಲುಗಾಡಿ;
ಉದುರುತಿವೆ ಮುದಿಕಡ್ಡಿ ತರಗು ಹಣ್ಣೆಲೆಗಳೆಲ್ಲ,
ನಲಿಯುತಿವೆ ನಳನಳಿಸಿ ಹೊಸಚಿಗುರು ಮೂಡಿ.
ತರುಣರಿರ, ಎದ್ದೇಳಿ! ಎಚ್ಚರಗೊಳ್ಳಿ! ನೋಡಿ!
ಮೊನ್ನೆಮೊನ್ನೆಯವರೆಗೆ ಪಶ್ಚಿಮದ ಹೊಲಗೇರಿ,
ಇಂದು ನಂದನವಾಗಿ ನಗುತಲಿದೆ ರಷ್ಯಾ.
ಗರ್ಜಿಸಲು ತೊಡಗಿಹುದು ಕೇಸರಂಗಳ ಕೆದರಿ
ಇದುವರೆಗೆ ಮಲಗಿ ನಿದ್ರಿಸುತಿದ್ದ ಏಷ್ಯಾ.
ತರುಣರಿರ, ಎದ್ದೇಳಿ! ಎಚ್ಚರಗೊಳ್ಳಿ! ಕೇಳಿ!
ಹಳೆಮತದ ಕೊಳೆಯೆಲ್ಲ ಹೊಸಮತಿಯ ಹೊಳೆಯಲ್ಲಿ
ಕೊಚ್ಚಿಹೋಗಲಿ; ಬರಲಿ ವಿಜ್ಞಾನ ಬುದ್ಧಿ.
ವೇದಪ್ರಮಾಣತೆಯ ಮರುಮರೀಚಿಕೆಯಲ್ಲಿ
ನೀರರಸಿ ಕೆಡದಿರಲಿ ಸ್ವಾತಂತ್ರ್ಯಸಿದ್ಧಿ.
ತರುಣರಿರ, ಎದ್ದೇಳಿ! ಎಚ್ಚರಗೊಳ್ಳಿ! ಬಾಳಿ!
ಹೊಸ ಬಾಳ ಗೀತೆಯನು ದಿಕ್ಕುದೆಸೆ ಬಿರಿವಂತೆ
ಕೊರಳೆತ್ತಿ ಕೈಯೆತ್ತಿ ದನಿಯೆತ್ತಿ ಹಾಡಿ.
ಸೇರಿ ನಡೆದರೆ ನಿಮ್ಮ ತಡೆಯುವವರಾರಿಲ್ಲ;
ಜಗವೆ ಹಿಂಜರಿಯುವುದು ನಿಡುದಾರಿ ನೀಡಿ.
ತರುಣರಿರ, ಎದ್ದೇಳಿ! ಎಚ್ಚರಗೊಳ್ಳಿ! ಮೂಡಿ!
-ಕುವೆಂಪು
No comments:
Post a Comment