'ಸಂತೆಯಲ್ಲಿ ನಿಂತ ಕಬೀರ' ನೋಡಿದೆ. ಸಿನಿಮಾದಲ್ಲಿ ಕೇಳಿಸಿದ ಒಂದು ಮಾತು: "ಬಾಯಲ್ಲಿ ಶಾಸ್ತ್ರ, ಕೈಯಲ್ಲಿ ಶಸ್ತ್ರಾನಾ?"
Sunday, July 31, 2016
Sunday, July 17, 2016
ನನ್ನ ವೃತ್ತಿಜೀವನದ ನೆನಪುಗಳು
ನಾನು ಇತ್ತೀಚೆಗೆ ‘ನನ್ನ ವೃತ್ತಿಜೀವನದ ನೆನಪುಗಳು’ ಕೃತಿಯನ್ನು ಓದಿದೆ. ಸರ್ ಎಂ ವಿಶ್ವೇಶ್ವರಯ್ಯನವರ ‘Memoirs of My Working Life’ ಕೃತಿಯನ್ನು ವೃತ್ತಿಯಿಂದ ಇಂಜಿನಿಯರ್ ಆಗಿರುವ ಡಾ. ಗಜಾನನ ಶರ್ಮ ಅವರು ಕನ್ನಡಕ್ಕೆ ತಂದಿದ್ದಾರೆ. ಆತ್ಮಕಥಾ ಸ್ವರೂಪದ ಈ ಕೃತಿಯಲ್ಲಿ ವಿಶ್ವೇಶ್ವರಯ್ಯನವರು ತಮ್ಮ ವೈಯಕ್ತಿಕ ಜೀವನದ ವಿವರಗಳನ್ನು ದಾಖಲಿಸದೆ ತಾವು ಇಂಜಿನಿಯರ್ ಆಗಿ ಹಾಗೂ ಮೈಸೂರಿನ ದಿವಾನರಾಗಿ ಕೈಗೊಂಡ ಕಾರ್ಯಗಳನ್ನು ವಿವರಿಸಿದ್ದಾರೆ. ಅಲ್ಲಲ್ಲಿ ಪತ್ರಗಳನ್ನೂ, ಭಾಷಣಗಳನ್ನೂ, ಪತ್ರಿಕಾ ವರದಿಗಳನ್ನೂ ಉಲ್ಲೇಖಿಸುತ್ತಾರೆ. ಕೃತಿಯು 19 ಅಧ್ಯಾಯಗಳನ್ನು ಹೊಂದಿದ್ದು, 7ನೆಯ ಅಧ್ಯಾಯದಲ್ಲಿ ತಾವು ದಿವಾನ ಹುದ್ದೆಯನ್ನು ಅಲಂಕರಿಸಿದಾಗ ಇದ್ದ ಮೈಸೂರಿನ ಪರಿಸ್ಥಿತಿಯನ್ನು ವಿವರಿಸುತ್ತಾರೆ. 8ನೆಯ ಅಧ್ಯಾಯದಲ್ಲಿ ಪ್ರಜಾಪ್ರತಿನಿಧಿ ಸಭೆ ಹಾಗೂ ಸ್ಥಳೀಯ ಸರ್ಕಾರಿ ಸಂಸ್ಥೆಗಳಿಗೆ ಹೆಚ್ಚಿನ ಅಧಿಕಾರ ಪ್ರಾಪ್ತವಾಗುವಲ್ಲಿ ತಮ್ಮ ಪಾತ್ರದ ಕುರಿತು ವಿವರಿಸುತ್ತಾರೆ. ಪುಟ 107 ಹಾಗೂ 108ರಲ್ಲಿ ತಾವು ದಿವಾನ ಹುದ್ದೆಯಿಂದ ಸ್ವಯಂ ನಿವೃತ್ತಿ ಹೊಂದಲು ಕಾರಣವಾದ ಪರಿಸ್ಥಿತಿಯನ್ನು ವಿವರಿಸುತ್ತಾರೆ. 14ನೆಯ ಅಧ್ಯಾಯದಲ್ಲಿ ತಾವು ಸದಸ್ಯರಾಗಿ ಹಾಗೂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ವಿವಿಧ ಸಮಿತಿಗಳ ಬಗ್ಗೆ ವಿವರಿಸುತ್ತಾರೆ. 15ನೆಯ ಅಧ್ಯಾಯದಲ್ಲಿ ತಾವು ಭಾಗವಹಿಸಿದ ರಾಜಕೀಯ ಸಮ್ಮೇಳನಗಳ ಬಗ್ಗೆ ಬರೆಯುತ್ತಾರೆ. 16ನೆಯ ಅಧ್ಯಾಯದಲ್ಲಿ ತಮ್ಮ ವಿದೇಶ ಪ್ರವಾಸಗಳ ಬಗ್ಗೆ ವಿವರಿಸುತ್ತಾರೆ. ಅವರು ಆರು ಬಾರಿ ವಿದೇಶ ಪ್ರವಾಸ ಕೈಗೊಂಡಿದ್ದು, ಅವು ಮೋಜಿನ ಪ್ರವಾಸಗಳಾಗಿರದೆ ಅಧ್ಯಯನ ಪ್ರವಾಸಗಳಾಗಿದ್ದವು. ತಮ್ಮ ಮೂರನೆಯ ವಿದೇಶ ಪ್ರವಾಸದಲ್ಲಿ ಲಂಡನ್ನಿನಲ್ಲಿ ಹತ್ತು ತಿಂಗಳ ಕಾಲ ತಂಗಿ ‘ರಿಕನ್‍ಸ್ಟ್ರಕ್ಟಿಂಗ್ ಇಂಡಿಯಾ’ ಕೃತಿಯನ್ನು ರಚಿಸಿದುದನ್ನೂ, ಅಲ್ಲಿಯ ಇಂಡಿಯಾ ಆಫೀಸ್ ಲೈಬ್ರರಿಯಲ್ಲಿ ಅವರಿಗೆ ಅಗತ್ಯವಿದ್ದ ಮಾಹಿತಿಗಳು ಲಭ್ಯವಾಗುತ್ತಿದ್ದುದರಿಂದ ಆ ಕೃತಿಯನ್ನು ರಚಿಸಲು ಲಂಡನ್ ಸೂಕ್ತ ಸ್ಥಳವಾಗಿತ್ತೆಂದೂ ಬರೆಯುತ್ತಾರೆ. ಕೊನೆಯ ಮೂರು ಅಧ್ಯಾಯಗಳು ಅವರ ವೃತ್ತಿಜೀವನದ ನೆನಪುಗಳಿಗೆ ಸಂಬಂಧಿಸಿರದೆ, ರಾಷ್ಟ್ರನಿರ್ಮಾಣಕ್ಕೆ ಸಂಬಂಧಿಸಿದ ಸಲಹೆಗಳನ್ನು ಒಳಗೊಂಡಿವೆ. 18ನೆಯ ಅಧ್ಯಾಯದಲ್ಲಿ ಅಮೆರಿಕನ್ ನಾಗರಿಕರು ಉದ್ಯಮಶೀಲರೆಂದೂ, ಭಾರತದ ಜನಸಂಖ್ಯೆಯಲ್ಲಿನ ಹೆಚ್ಚು ಭಾಗ ಶಿಕ್ಷಣದಿಂದ ವಂಚಿತರಾಗಿ, ಪರಂಪರಾಗತ ಬದುಕಿನಲ್ಲೇ ತೃಪ್ತರಾಗಿ, ಉದ್ಯಮಶೀಲತೆಯನ್ನು ಕೈಬಿಟ್ಟಿದ್ದಾರೆಂದೂ ಬರೆಯುತ್ತಾರೆ. 188 ಪುಟಗಳ ಈ ಕೃತಿಯ ಬೆಲೆ 120 ರೂಪಾಯಿಗಳು. ‘ಅಂಕಿತ ಪುಸ್ತಕ’ ಪ್ರಕಟಿಸಿರುವ ಈ ಕೃತಿ 2011ರಲ್ಲಿ ನಾಲ್ಕನೆಯ ಮುದ್ರಣ ಕಂಡಿದೆ.
-ತ. ನಂ.
ಜ್ಞಾನೇಶ್ವರ
Saturday, April 9, 2016
ವಿವೇಕಾನಂದರ ಕ್ರಾಂತಿಕಾರಿ ವಿಚಾರಗಳು
ನಾನು ಇತ್ತೀಚೆಗೆ ಜ ಹೊ ನಾರಾಯಣಸ್ವಾಮಿಯವರ ‘ವಿವೇಕಾನಂದರ ಕ್ರಾಂತಿಕಾರಿ ವಿಚಾರಗಳು’ ಕೃತಿಯನ್ನು ಓದಿದೆ. ಜ ಹೊ ನಾರಾಯಣಸ್ವಾಮಿಯವರು ಸ್ವಾಮಿ ವಿವೇಕಾನಂದರ ‘ಕ್ರಾಂತಿಕಾರಿ’ ವಿಚಾರಗಳನ್ನು ಮೈಸೂರಿನ ಶ್ರೀ ರಾಮಕೃಷ್ಣಾಶ್ರಮವು 1974ರಲ್ಲಿ ಹತ್ತು ಸಂಪುಟಗಳಲ್ಲಿ ಪ್ರಕಟಿಸಿರುವ ‘ಸ್ವಾಮಿ ವಿವೇಕಾನಂದರ ಕೃತಿಶ್ರೇಣಿ’ಯಿಂದ ಆಯ್ದು ವಿವಿಧ ಶೀರ್ಷಿಕೆಗಳಡಿ ವಿಂಗಡಿಸಿಕೊಟ್ಟಿದ್ದಾರೆ. ಪ್ರತಿ ಉಲ್ಲೇಖವು ಯಾವ ಸಂಪುಟದ ಯಾವ ಪುಟದಲ್ಲಿದೆ ಎಂಬ ವಿವರವನ್ನು ಪುಸ್ತಕದ ಕೊನೆಯಲ್ಲಿ ನೀಡಿದ್ದಾರೆ. ಕೃತಿಯ ಆರಂಭದಲ್ಲಿ ಖ್ಯಾತ ವಿಮರ್ಶಕ ಪ್ರೊ.ಕೆ.ಎಸ್.ಭಗವಾನ್ ಅವರ ‘ಸ್ವಾಮಿ ವಿವೇಕಾನಂದ: ಶಕ್ತಿಯ ಸಂಕೇತ’ ಎಂಬ ಬರೆಹವಿದೆ. ನಾಲ್ಕನೆಯ ಮುದ್ರಣದಲ್ಲಿ ‘ಪೀಠಿಕೆ’ ಹಾಗೂ ‘ಸಂಕ್ಷಿಪ್ತ ಜೀವನ’ ಸೇರ್ಪಡೆಗೊಂಡಿವೆ. 1986ರಲ್ಲಿ ಮೊದಲ ಬಾರಿಗೆ ಪ್ರಕಟವಾಗಿರುವ ಈ ಕೃತಿ 2015ರಲ್ಲಿ ಆರನೆಯ ಮುದ್ರಣ ಕಂಡಿದೆ. “ವಿವೇಕಾನಂದರ ಕ್ರಾಂತಿಕಾರಿ ವಿಚಾರಗಳನ್ನು ಯುವಜನರು, ಹಿರಿಯರು ಹಳ್ಳಿಹಳ್ಳಿಗೂ ಮೂಲೆಮೂಲೆಗೂ ತಲುಪಿಸಬೇಕೆಂದು ಅವರಲ್ಲಿ ನನ್ನ ಕಳಕಳಿಯ ಪ್ರಾರ್ಥನೆ” ಎಂದು ಕುವೆಂಪು ಅವರು ತಮ್ಮ ‘ಹಾರೈಕೆ’ಯಲ್ಲಿ ತಿಳಿಸಿದ್ದಾರೆ. “ಯಾರ ದೇಹದ ದುಡಿತದಿಂದ ಮಾತ್ರ ಬ್ರಾಹ್ಮಣರ ಕೀರ್ತಿ, ಕ್ಷತ್ರಿಯರ ಪ್ರಾಬಲ್ಯ, ವೈಶ್ಯರ ಐಶ್ವರ್ಯ ಸಾಧ್ಯವಾಯಿತೊ ಅವರು ಎಲ್ಲಿ ಇರುವರು?” (ಪುಟ 37) ಎಂದು ವಿವೇಕಾನಂದರು ಪ್ರಶ್ನಿಸುತ್ತಾರೆ. “ಶೂದ್ರರು ಕೇವಲ ತಮ್ಮ ತಮ್ಮ ಶೂದ್ರತ್ವದಿಂದಲೇ ಮೇಲೇಳುವ ಒಂದು ಕಾಲ ಬರುವುದು” (ಪುಟ 39) ಎಂದು ಭವಿಷ್ಯ ನುಡಿಯುತ್ತಾರೆ. “ಪೌರೋಹಿತ್ಯವೇ ಭರತಖಂಡದ ವಿನಾಶಕ್ಕೆ ಕಾರಣ” (ಪುಟ 40) ಎಂದು ಘೋಷಿಸುತ್ತಾರೆ. “ಜನಸಾಮಾನ್ಯರನ್ನು ವಿದ್ಯಾವಂತರನ್ನಾಗಿ ಮಾಡಬೇಕು” (ಪುಟ 41) ಎಂದು ಸಲಹೆ ನೀಡುತ್ತಾರೆ. “ಇಷ್ಟೊಂದು ಮಂದಿ ಭಿಕ್ಷುಕರಿರುವ ಜನಾಂಗ ಪ್ರಪಂಚದಲ್ಲಿ ಮತ್ತೆಲ್ಲಿಯೂ ಇಲ್ಲ” (ಪುಟ 43) ಎಂದು ವಿಷಾದದಿಂದ ನುಡಿಯುತ್ತಾರೆ.“ ಉಪನಿಷತ್ತಿನ ತತ್ತವೆಲ್ಲ ರಾಜರ ಬುದ್ಧಿಯಿಂದ ಬಂದುದು, ಬ್ರಾಹ್ಮಣನಿಂದಲ್ಲ” (ಪುಟ 54) ಎಂದು ಹೇಳುತ್ತಾರೆ. “ವೇದಾಂತದ ಮಿದುಳು ಇಸ್ಲಾಮಿನ ದೇಹ ಇದೊಂದೇ ನಮ್ಮ ಪುರೋಗಮನಕ್ಕೆ ಹಾದಿ” (ಪುಟ 60) ಎನ್ನುತ್ತಾರೆ. “ಒಬ್ಬನು ಮಹಮ್ಮದೀಯನಾದ ತಕ್ಷಣ ಇಡೀ ಇಸ್ಲಾಂ ಪ್ರಪಂಚ ಅವನನ್ನು ತಮ್ಮ ಸಹೋದರನಂತೆ ಯಾವ ವ್ಯತ್ಯಾಸವನ್ನೂ ಮಾಡದೆ ಸ್ವೀಕರಿಸುವುದು. ಮತ್ತಾವ ಧರ್ಮವೂ ಹೀಗೆ ಮಾಡಲಾರದು” (ಪುಟ 65) ಎನ್ನುತ್ತಾರೆ. “ಭರತಖಂಡದಲ್ಲಿ ಮಹಮ್ಮದೀಯರ ವಿಜಯ ದೀನರಿಗೆ ದುರ್ಬಲರಿಗೆ ಮುಕ್ತಿಯಂತೆ ಬಂತು” (ಪುಟ 76) ಎಂದು ಹೇಳುತ್ತಾರೆ.
-ತ. ನಂ. ಜ್ಞಾನೇಶ್ವರ
Sunday, March 20, 2016
‘ಲಂಕೇಶ್ ಹೇಗಿದ್ದರು!?’
ನಾನು ಇತ್ತೀಚೆಗೆ
ಡಾ. ಹಾಲತಿ ಸೋಮಶೇಖರ್ ಅವರ ‘ಲಂಕೇಶ್ ಹೇಗಿದ್ದರು!?’ ಪುಸ್ತಕ ಓದಿದೆ. ಪುಸ್ತಕದ ಶೀರ್ಷಿಕೆಯು ಆಶ್ಚರ್ಯಸೂಚಕ
ಹಾಗೂ ಪ್ರಶ್ನಾರ್ಥಕ ಚಿಹ್ನೆಗಳೆರಡನ್ನೂ ಹೊಂದಿದೆ. ಪಿಎಚ್.ಡಿ. ಪದವಿಗಾಗಿ ಲಂಕೇಶ್ ಅವರ ಸಾಹಿತ್ಯದ
ಬಗ್ಗೆ ಅಧ್ಯಯನ ಮಾಡಿದ ಸೋಮಶೇಖರ್ ಅವರು ಲಂಕೇಶ್ ಅವರ ವ್ಯಕ್ತಿತ್ವದ ನಾನಾ ಬಣ್ಣಗಳನ್ನು ಕಂಡರು. ಲಂಕೇಶರ
ಬಗ್ಗೆ ಅವರನ್ನು ಬಲ್ಲವರು ಬರೆದಿರುವ ಮಾತುಗಳ ಜೊತೆಗೆ ಲಂಕೇಶ್ ಅವರೇ ಬರೆದುಕೊಂಡ ಮಾತುಗಳನ್ನೂ ಸೇರಿಸಿ
ಈ ಪುಸ್ತಕ ರಚಿಸಿದ್ದಾರೆ. ಇದಕ್ಕಾಗಿ ಅವರು 39 ಪತ್ರಿಕೆ, ಪುಸ್ತಕಗಳನ್ನು ಪರಾಮರ್ಶಿಸಿದ್ದಾರೆ. ಅಲ್ಲಲ್ಲೇ
ಅವುಗಳ ಉಲ್ಲೇಖಗಳನ್ನೂ ಕೊಟ್ಟಿದ್ದಾರೆ. ಹೀಗಾಗಿ ಈ ಕೃತಿಗೆ ಒಂದು ಅಧಿಕೃತತೆ ಬಂದಿದೆ. ಕನ್ನಡದಲ್ಲಿ
ಇದು ಈ ಬಗೆಯ ಮೊದಲ ಕೃತಿ.
ಈ ಕೃತಿಯು ‘ಲಂಕೇಶ್
– ಹೀಗಿದ್ದರು!’, ‘ಲಂಕೇಶ್ – ಹೀಗೂ ಇದ್ದರು!!’, ‘ಲಂಕೇಶ್ – ಹೀಗಿದ್ದರೆ?’, ‘ಲಂಕೇಶ್ – ಹೀಗಿರಲಿಲ್ಲ!’
ಹಾಗೂ ‘ಸಾರ್ವಕಾಲಿಕ ಲಂಕೇಶ್: ಸಮಕಾಲೀನರೊಂದಿಗೆ’ ಎಂಬ ನಾಲ್ಕು ಭಾಗಗಳಲ್ಲಿ ಹರಡಿಕೊಂಡಿದ್ದು ಎರಡು
ಅನುಬಂಧಗಳನ್ನೂ ಒಳಗೊಂಡಿದೆ. ಲಂಕೇಶ್ ಸಮಕಾಲೀನರಾದ ಚಂದ್ರಶೇಖರ ಪಾಟೀಲರು ಮುನ್ನುಡಿ ಬರೆದಿದ್ದಾರೆ.
ಪುಸ್ತಕವು ಲಂಕೇಶ್
ಅವರ ವರ್ಣರಂಜಿತ ಸಂಕೀರ್ಣ ವ್ಯಕ್ತಿತ್ವವನ್ನು ಬಿಚ್ಚಿಟ್ಟಿದೆ. ಕೃತಿಯನ್ನು ಓದುವಾಗ ಇಂಗ್ಲಿಷ್ ಕವಿಯೊಬ್ಬನ
ಬಗ್ಗೆ ಓದಿದಂತೆ ಭಾಸವಾಗುತ್ತದೆ. ಕನ್ನಡದ ಪರಿಸರದಲ್ಲಿ ಇಷ್ಟು ವರ್ಣರಂಜಿತ ವ್ಯಕ್ತಿತ್ವದ ಇನ್ನೊಬ್ಬ
ಸಾಹಿತಿಯನ್ನು ಕಾಣುವುದು ಸಾಧ್ಯವಿಲ್ಲ. ಲಂಕೇಶ್ ಅವರ ಭ್ರಮೆಗಳು, ತಿಕ್ಕಲುತನಗಳು, ಒರಟುತನ, ಅಸೂಯೆ,
ಅಹಂಕಾರ, ಕೋಪ, ಪ್ರಾಮಾಣಿಕತೆ, ಸಹಲೇಖಕರೊಂದಿಗಿನ ಅವರ ರಾಗದ್ವೇಷಗಳು ಇವನ್ನೆಲ್ಲ ರಂಜಕವಾಗಿ ನಿರೂಪಿಸಿದ್ದಾರೆ
ಹಾಲತಿ ಸೋಮಶೇಖರ್. ಲಂಕೇಶ್ ಅವರ ದ್ವಂದ್ವ ವ್ಯಕ್ತಿತ್ವವನ್ನು ಈ ಕೃತಿ ಅನಾವರಣಗೊಳಿಸಿದೆ.
“ಲಂಕೇಶ್ ಒರಟು ನಡೆಯ
ಹಿಂದಿನ ಪ್ರಾಮಾಣಿಕತೆಯನ್ನು ಗುರುತಿಸುವ ಕೆಲಸವನ್ನು” ಹಾಲತಿ ಸೋಮಶೇಖರ್ ಮಾಡಿದ್ದಾರೆಂದು ಎಸ್.ಜಿ.
ಸಿದ್ಧರಾಮಯ್ಯನವರು ನುಡಿಯುತ್ತಾರೆ. “ಲಂಕೇಶ್ ಬಗ್ಗೆ ಎಲ್ಲಾ ವಿಧದ ಪ್ರೀತಿ ಗೌರವಗಳನ್ನು ಇಟ್ಟುಕೊಂಡು
ಅವರ ಮೇಲೆ ಅಷ್ಟೇ ನಿರ್ಮಮಕಾರವನ್ನು ತಾಳಿರುವುದರಿಂದ ಹಾಲತಿ ಅವರ ವಸ್ತುನಿಷ್ಠತೆ ಮೇಲುಗೈ ಸಾಧಿಸಿದೆ”
ಎಂದು ಪ್ರೊ. ಕೆ. ಎಸ್. ಭಗವಾನ್ ಹೇಳುತ್ತಾರೆ. ಪ್ರಾಸಂಗಿಕವಾಗಿ ಬಂದ ಈ ಕೃತಿಯನ್ನು ಸ್ವಾಗತಿಸಿದ
ಪ್ರೊ. ಎಂ. ಕೃಷ್ಣೇಗೌಡರು “ಸಾಹಿತಿಗಳ ಕಪ್ಪು ಬಿಳಿ ಮುಖಗಳನ್ನು ಅನಾವರಣ ಮಾಡುವುದರಲ್ಲೇ ಸೋಮಶೇಖರ್
ಅವರ ಸಮಯ, ಶಕ್ತಿ, ಪ್ರತಿಭೆ ವ್ಯಯವಾಗಬಾರದು” ಎಂಬ ಎಚ್ಚರಿಕೆಯನ್ನೂ ಕೊಡುತ್ತಾರೆ.
2015ರಲ್ಲಿ ಮೊದಲ
ಮುದ್ರಣ ಕಂಡಿರುವ ಈ ಕೃತಿಯನ್ನು ಮೈಸೂರಿನ ವಿಸ್ಮಯ ಪ್ರಕಾಶನ ಪ್ರಕಟಿಸಿದೆ. 147+xx ಪುಟಗಳ ಈ ಕೃತಿಯ
ಬೆಲೆ 160 ರೂಪಾಯಿಗಳು. ಮುಖಪುಟ ಅಷ್ಟೊಂದು ಆಕರ್ಷಕವಾಗಿಲ್ಲ.
- ತ. ನಂ. ಜ್ಞಾನೇಶ್ವರ
Subscribe to:
Posts (Atom)