ಪುಸ್ತಕದ ಹೆಸರು: ಕಾವೇರಿ ವಿವಾದ
ಪ್ರಕಾಶಕರು: ಕರ್ನಾಟಕ ಜನಪರ ವೇದಿಕೆ, ಬೆಂಗಳೂರು
ಪ್ರಕಟಣೆಯ ವರ್ಷ: ೨೦೦೭
ಪುಟಗಳು: ೬೦
ಬೆಲೆ: ರೂ. ೨೦/-
‘ಕಾವೇರಿ ವಿವಾದ’ ಎಂಬ ಪುಸ್ತಕವನ್ನು ಓದಿದೆ. ಈ ಪುಸ್ತಕವನ್ನು ಕರ್ನಾಟಕ ಜನಪರ ವೇದಿಕೆ ೨೦೦೭ರ ಫೆಬ್ರವರಿಯಲ್ಲಿ ಪ್ರಕಟಿಸಿದ್ದು ಒಂದು ತಿಂಗಳಲ್ಲೆÃ ಎಲ್ಲ ಪ್ರತಿಗಳು ಮುಗಿದುಹೋಗಿ ಅದೇ ವರ್ಷದ ಮಾರ್ಚ್ ತಿಂಗಳಲ್ಲಿ ಎರಡನೇ ಆವೃತ್ತಿ ಪ್ರಕಟವಾಗಿದೆ. ೬೦ ಪುಟಗಳ ಈ ಕೃತಿಯು ೬ ಅಧ್ಯಾಯಗಳನ್ನೂ, ೩ ಅನುಬಂಧಗಳನ್ನೂ ಒಳಗೊಂಡಿದೆ. ಈ ಕೃತಿಯು ಕಾವೇರಿ ನದಿಯ ಭೌಗೋಳಿಕ ಪರಿಚಯ, ಕಾವೇರಿ ಜಲವಿವಾದದ ಹುಟ್ಟು, ಬೆಳವಣಿಗೆ, ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪು, ಕರ್ನಾಟಕಕ್ಕೆ ಇದುವರೆಗೆ ಆಗಿರುವ ಅನ್ಯಾಯ, ಪರಿಹಾರೋಪಾಯಗಳು ಮುಂತಾದ ವಿಚಾರಗಳನ್ನು ಚರ್ಚಿಸುತ್ತದೆ. ಕಾವೇರಿ ಜಲವಿವಾದವು ಕೇರಳ, ಕರ್ನಾಟಕ, ತಮಿಳುನಾಡು ಹಾಗೂ ಪುದಚೇರಿ ಹೀಗೆ ನಾಲ್ಕು ರಾಜ್ಯಗಳಿಗೆ ಸಂಬಂಧಿಸಿದ ವಿವಾದವಾಗಿದೆ. ಕಾವೇರಿಯು ಕರ್ನಾಟಕದಲ್ಲಿ ಹುಟ್ಟಿ ತಮಿಳುನಾಡಿನಲ್ಲಿ ಬಂಗಾಳಕೊಲ್ಲಿಯನ್ನು ಸೇರುತ್ತದೆ. ೮೦೨ ಕಿ.ಮೀ. ಉದ್ದ ಹರಿಯುವ ಕಾವೇರಿಯು ಕರ್ನಾಟಕದಲ್ಲಿ ೩೮೧ ಕಿ.ಮೀ., ತಮಿಳುನಾಡಿನಲ್ಲಿ ೩೫೭ ಕಿ.ಮೀ. ಹಾಗೂ ಎರಡೂ ರಾಜ್ಯಗಳ ಗಡಿಯಲ್ಲಿ ೬೪ ಕಿ.ಮೀ. ಹರಿಯುತ್ತದೆ. ಕಾವೇರಿಗೆ ಕರ್ನಾಟಕವು ಶೇ. ೫೩, ತಮಿಳುನಾಡು ಹಾಗೂ ಪುದುಚೇರಿ ಶೇ. ೩೦ ಹಾಗೂ ಕೇರಳ ಶೇ. ೧೭ರಷ್ಟು ಕೊಡುಗೆ ನೀಡುತ್ತವೆ. ೧೮೯೨ರಲ್ಲಿ ಮದ್ರಾಸ್ ಸರ್ಕಾರವು ಮೈಸೂರು ಸಂಸ್ಥಾನದ ನೀರಾವರಿ ಪ್ರಸ್ತಾಪಗಳಿಗೆ ಆಕ್ಷೆÃಪಣೆ ಎತ್ತಿದ ಪರಿಣಾಮವಾಗಿ ೧೮೯೨ರಲ್ಲಿ ಒಂದು ಒಪ್ಪಂದಕ್ಕೆ ಬರಲಾಯಿತು. ಈ ಒಪ್ಪಂದದ ಮುಂದುವರಿಕೆಯಾಗಿ ೧೯೨೪ರಲ್ಲಿ ಮತ್ತೊಂದು ಒಪ್ಪಂದ ಮಾಡಿಕೊಳ್ಳಲಾಯಿತು. ೧೮೯೨ರ ಒಪ್ಪಂದವು ಮೈಸೂರು ಸಂಸ್ಥಾನವು ಮದ್ರಾಸ್ ಸರ್ಕಾರದ ಅನುಮತಿಯಿಲ್ಲದೆ ಯಾವುದೇ ನೀರಾವರಿ ಕಾಮಗಾರಿಯನ್ನು ಕೈಗೊಳ್ಳಬಾರದು ಎಂದು ಹೇಳುತ್ತದೆ. ೧೯೨೪ರ ಒಪ್ಪಂದದ ಅನ್ವಯ ೧೯೩೧ರಲ್ಲಿ ಮೈಸೂರು ಸಂಸ್ಥಾನಕ್ಕೆ ಸೇರಿದ ಕನ್ನಂಬಾಡಿಯ ಬಳಿ ೪೪.೮೩ ಟಿ.ಎಂ.ಸಿ. ಸಾಮರ್ಥ್ಯದ ಕೃಷ್ಣರಾಜಸಾಗರ ಅಣೆಕಟ್ಟು ಹಾಗೂ ೧೯೩೪ರಲ್ಲಿ ಮದ್ರಾಸ್ ಪ್ರಾಂತ್ಯಕ್ಕೆ ಸೇರಿದ ಮೆಟ್ಟೂರಿನಲ್ಲಿ ೯೩.೫ ಟಿ.ಎಂ.ಸಿ. ಸಾಮರ್ಥ್ಯದ ಜಲಾಶಯವನ್ನು ನಿರ್ಮಿಸಲಾಯಿತು. ಎರಡೂ ಒಪ್ಪಂದಗಳು ಏಕಪಕ್ಷಿÃಯವಾಗಿದ್ದು ಮದ್ರಾಸ್ ಪ್ರಾಂತ್ಯದ ಪರವಾಗಿದ್ದವು. ೧೯೫೮ರಲ್ಲಿ ಕರ್ನಾಟಕವು ಹೇಮಾವತಿ, ಕಬಿನಿ, ಸುವರ್ಣಾವತಿ ಹಾಗೂ ಹಾರಂಗಿ ಯೋಜನೆಗಳನ್ನು ಆರಂಭಿಸಿದಾಗ ತಮಿಳುನಾಡು ಆಕ್ಷೆÃಪಣೆ ಎತ್ತಿತು. ೧೯೯೦ರಲ್ಲಿ ಭಾರತ ಸರ್ಕಾರವು ಕಾವೇರಿ ಜಲವಿವಾದ ನ್ಯಾಯ ಪಂಚಾಯಿತಿಯನ್ನು ರಚಿಸಿತು. ಈ ನ್ಯಾಯಮಂಡಳಿಯು ೧೯೯೧ರಲ್ಲಿ ಮಧ್ಯಂತರ ಆದೇಶ ನೀಡಿ ಕರ್ನಾಟಕವು ತಮಿಳುನಾಡಿಗೆ ೨೦೫ ಟಿ.ಎಂ.ಸಿ. ನೀರು ಬಿಡಬೇಕೆಂದು ಆದೇಶಿಸಿತು. ೨೦೦೭ರಲ್ಲಿ ಅಂತಿಮ ತೀರ್ಪು ನೀಡಿತು. ಲಭ್ಯವಿರುವ ೭೪೦ ಟಿ.ಎಂ.ಸಿ. ನೀರನ್ನು ಪರಿಸರ ಸಂರಕ್ಷಣೆಗಾಗಿ ೧೦ ಟಿ.ಎಂ.ಸಿ. ಹಾಗೂ ಸಮುದ್ರಕ್ಕೆ ಅನಿವಾರ್ಯವಾಗಿ ಹರಿದುಹೋಗುವ ೪ ಟಿ.ಎಂ.ಸಿ. ಹೊರತುಪಡಿಸಿ ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಪುದುಚೇರಿಗಳಿಗೆ ಕ್ರಮವಾಗಿ ೨೭೦, ೪೧೯, ೩೦ ಹಾಗೂ ೭ ಟಿ.ಎಂ.ಸಿ. ನೀರನ್ನು ಹಂಚಿತು. ಕಾವೇರಿಯ ಒಟ್ಟು ಹರಿವಿನಲ್ಲಿ ಶೇ. ೫೩.೮ರಷ್ಟು ಕೊಡುಗೆ ನೀಡುವ ಕರ್ನಾಟಕಕ್ಕೆ ಶೇ. ೩೩ರಷ್ಟು ಪಾಲು ಹಾಗೂ ಶೇ. ೩೧.೯ರಷ್ಟು ಪಾಲು ನೀಡುವ ತಮಿಳುನಾಡಿಗೆ ಶೇ. ೫೩ರಷ್ಟು ಪಾಲು ನೀಡುವ ಈ ಆದೇಶ ಅಸಮಾನತೆಯಿಂದ ಕೂಡಿದೆ. ವಸಾಹತುಶಾಹಿಯ ಕಾಲದಲ್ಲಿ ಮಾಡಿಕೊಳ್ಳಲಾದ ೧೮೯೨ ಹಾಗೂ ೧೯೨೪ರ ಒಪ್ಪಂದಗಳು ಸ್ವಾತಂತ್ರ್ಯಾನಂತರವೂ ಹೇಗೆ ಸಿಂಧುವಾಗುತ್ತವೆ ಎಂಬ ಅಂಶವನ್ನು ಈ ಪುಸ್ತಕದಲ್ಲಿ ಪ್ರಶ್ನಿಸಲಾಗಿದೆ.
-ತ. ನಂ. ಜ್ಞಾನೇಶ್ವರ