Sunday, July 11, 2021

ಕಲ್ಲು ಸೇವೆ - ಹೀಗೊಂದು ಜನಪದ ಆಚರಣೆ

ಗಂಗಮ್ಮನ ಗುಡ್ಡೆ, ಶೆಟ್ಟಿಗೆರೆ, ಕುಣಿಗಲ್‌ ತಾಲ್ಲೂಕು

ಕುಣಿಗಲ್‌ನಿಂದ ಈಶಾನ್ಯ ದಿಕ್ಕಿಗೆ ೧೦ ಕಿ.ಮೀ. ಹೋದರೆ ಶೆಟ್ಟಿಗೆರೆ ಸಿಗುತ್ತದೆ. ಕುಣಿಗಲ್‌ನಿಂದ ಶೆಟ್ಟಿಗೆರೆಗೆ ಹೋಗುವ ದಾರಿಯಲ್ಲಿ ಬಲಗಡೆಗೆ ಎರಡು ಕಲ್ಲುಗುಡ್ಡೆಗಳು ಕಾಣಿಸುತ್ತವೆ. ಇವನ್ನು ಸ್ಥಳೀಯ ಜನರು ‘ಗಂಗಮ್ಮನ ಗುಡ್ಡೆ’ ಎನ್ನುತ್ತಾರೆ. ದಾರಿಯಲ್ಲಿ ಹೋಗುವವರೆಲ್ಲ ಅದರ ಮೇಲೆ ಮೂರು ಕಲ್ಲುಗಳನ್ನು ಎಸೆದು ಹೋಗುತ್ತಾರೆ. ಇದನ್ನು ‘ಕಲ್ಲು ಸೇವೆ’ ಎನ್ನುತ್ತಾರೆ. 

ಸುಮಾರು ಎಪ್ಪತ್ತು ವರ್ಷಗಳ ಹಿಂದಿನ ಮಾತು. ಆ ಊರಿನ ಪಟೇಲರ ಮಗಳು ಗಂಗಮ್ಮನನ್ನು ಕೋಘಟ್ಟ ಗ್ರಾಮದ ವರನಿಗೆ ಕೊಟ್ಟು ಮದುವೆ ಮಾಡಿದ್ದರು. ತುಂಬು ಗರ್ಭಿಣಿಯಾಗಿದ್ದ ಆಕೆಯನ್ನು ಹೆರಿಗೆಗೆಂದು ತವರಿಗೆ ಕರೆದುಕೊಂಡು ಬಂದಿದ್ದರು. 

ಒಂದು ದಿನ ಗಂಗಮ್ಮ ಎಣ್ಣೆ ಬಟ್ಟಲನ್ನು ಮುಂದಿಟ್ಟುಕೊಂಡು ತಲೆ ಬಾಚಿಕೊಳ್ಳಲು ಅಣಿಯಾಗುತ್ತಿದ್ದಾಗ ಒಬ್ಬ ಬುಡುಬುಡಿಕೆಯವನು ಬಂದ. ಗಂಗಮ್ಮ ಎಣ್ಣೆ ಬಟ್ಟಲನ್ನು ಅಲ್ಲಿಯೇ ಬಿಟ್ಟು ಭಿಕ್ಷೆ ತರಲು ಒಳಗೆ ಹೋದಳು. ಆಕೆ ಒಳಗೆ ಹೋಗುವುದನ್ನೇ ಕಾಯುತ್ತಿದ್ದ ಬುಡುಬುಡಿಕೆಯವನು, ಎಣ್ಣೆ ಬಟ್ಟಲಿಗೆ ವಿಷವನ್ನು ಹಿಂಡಿದ. ಇದನ್ನು ಅರಿಯದ ಗಂಗಮ್ಮ, ಬುಡುಬುಡಿಕೆಯವನಿಗೆ ಭಿಕ್ಷೆ ಹಾಕಿ, ನಂತರ ಎಣ್ಣೆಯನ್ನು ತಲೆಗೆ ಹಚ್ಚಿಕೊಳ್ಳುತ್ತಾಳೆ. ತತ್ಪರಿಣಾಮವಾಗಿ ಆಕೆ ಸಾವನ್ನಪ್ಪುತ್ತಾಳೆ. ಯಾರದೋ ಕನಸಿಗೆ ಬಂದು, ತನ್ನನ್ನು ಮಣ್ಣು ಮಾಡಬಾರದೆಂದೂ, ಕಲ್ಲುಗಳಿಂದ ಮುಚ್ಚಬೇಕೆಂದೂ ಹೇಳುತ್ತಾಳೆ. ತನಗೆ ಗುಡಿ ಕಟ್ಟಬಾರದೆಂದೂ ಹೇಳುತ್ತಾಳೆ. 

ಗಂಗಮ್ಮನ ಆಸೆಯಂತೆ ಆಕೆಯ ಶವವನ್ನು ಕಲ್ಲುಗಳಿಂದ ಮುಚ್ಚುತ್ತಾರೆ. ಒಂದೆರಡು ದಿನಗಳ ಬಳಿಕ ಅದೇ ಬುಡುಬುಡಿಕೆಯವನು ಗಂಗಮ್ಮನ ಸಮಾಧಿಯ ಬಳಿ ಬಂದು, ಮಾಟ ಮಂತ್ರದ ಉದ್ದೇಶಕ್ಕಾಗಿ, ಆಕೆಯ ಹಸ್ತ ಹಾಗೂ ಪಾದಗಳನ್ನು ಕತ್ತರಿಸಿಕೊಂಡು ಹೋಗುತ್ತಾನೆ.  

ಪಕ್ಕದ ಹಳ್ಳಿಯವನೊಬ್ಬ ರಾತ್ರಿಯ ಹೊತ್ತಿನಲ್ಲಿ ಆ ದಾರಿಯಲ್ಲಿ ನಡೆದು ಹೋಗುತ್ತಿದ್ದ. ಸಮಾಧಿಯ ಬಳಿ ಬರುತ್ತಿದ್ದಂತೆ ಹೊಟ್ಟೆ ನೋವು ತಾಳಲಾರದೆ ಕುಸಿದು ಬಿದ್ದ. ಗಂಗಮ್ಮ ಆತನ ಮೈಮೇಲೆ ಬಂದು ಆ ದಾರಿಯಲ್ಲಿ ಹೋಗುವವರೆಲ್ಲ ತನ್ನ ಸಮಾಧಿಯ ಮೇಲೆ ಮೂರು ಕಲ್ಲುಗಳನ್ನು ಎಸೆಯಬೇಕೆಂದು ಹೇಳಿದಳು.

ಕೆಲವು ದಿನಗಳ ನಂತರ ಗಂಗಮ್ಮ ಸೊಬಗಾನಹಳ್ಳಿ ಗ್ರಾಮದ ಬಸುರಿಯೊಬ್ಬಳ ಕನಸಿನಲ್ಲಿ ಬಂದು ತನಗೆ ಸಲ್ಲುತ್ತಿರುವ ಸೇವೆಯಲ್ಲಿ ಅರ್ಧ ಸೇವೆಯನ್ನು ಅವಳಿಗೂ ಕೊಡಿಸುವುದಾಗಿ ಹೇಳುತ್ತಾಳೆ. ಒಂದೆರಡು ದಿನಗಳಲ್ಲಿ ಆ ಬಸುರಿ ಹೆಂಗಸು ಮರಣವನ್ನಪ್ಪುತ್ತಾಳೆ. ಆಕೆಯ ಶವವನ್ನೂ ಗಂಗಮ್ಮನ ಸಮಾಧಿಯ ಪಕ್ಕದಲ್ಲೇ ಕಲ್ಲುಗಳಿಂದ ಮುಚ್ಚುತ್ತಾರೆ. ಗಂಗಮ್ಮನ ಸಮಾಧಿ ಪೂರ್ವ ಪಶ್ಚಿಮವಾಗಿದ್ದರೆ, ಇನ್ನೊಬ್ಬ ಹೆಂಗಸಿನ ಸಮಾಧಿ ಉತ್ತರ ದಕ್ಷಿಣವಾಗಿದೆ. ಇಬ್ಬರ ಸಮಾಧಿಗಳೂ ಆಯತಾಕಾರದ ಕಲ್ಲು ರಾಶಿಗಳಾಗಿ ಬೆಳೆದಿವೆ. 

ಈಗಲೂ ಆ ದಾರಿಯಲ್ಲಿ ಹೋಗುವವರು ಸಮಾಧಿಯ ಮೇಲೆ ಮೂರು ಕಲ್ಲುಗಳನ್ನು ಎಸೆದು ಹೋಗುತ್ತಾರೆ. ಕೆಲವು ಹೆಂಗಸರು ವರ್ಷಕ್ಕೊಮ್ಮೆ ಬಂದು ಪೂಜೆ ಸಲ್ಲಿಸಿ ಹೋಗುತ್ತಾರೆ. ಪೂಜೆ ಮಾಡುವವರ ಅನುಕೂಲಕ್ಕಾಗಿ ಬಾವಿ ತೆಗೆಸಬೇಕೆಂದು ಜೋಯಿಸರನ್ನು ಕೇಳುತ್ತಾರೆ. ಜೋಯಿಸರು ಬಾವಿ ತೆಗೆದರೆ ಒಂದು ಸರ್ಪ ಹಾಗೂ ಒಂದು ಕಪ್ಪೆ ಸಿಗುತ್ತದೆ ಎಂದು ಹೇಳಿದ್ದರಿಂದ ಬಾವಿ ತೆಗೆಯುವ ಪ್ರಯತ್ನವನ್ನು ಕೈಬಿಡುತ್ತಾರೆ. 

ಈ ಸಮಾಧಿಗಳು ಶೆಟ್ಟಿಗೆರೆ ಗ್ರಾಮದಿಂದ ಪಶ್ಚಿಮಕ್ಕೆ ಒಂದು ಕಿ.ಮೀ. ದೂರದಲ್ಲಿ ಶೆಟ್ಟಿಗೆರೆ-ಕುಣಿಗಲ್ ರಸ್ತೆಯ ಪಕ್ಕದಲ್ಲಿವೆ. ಈಗ ಸಣ್ಣ ಗುಡಿಯೊಂದನ್ನು ಕಟ್ಟಿದ್ದಾರೆ.

-ತ.ನಂ. ಜ್ಞಾನೇಶ್ವರ