This video is about Dr. H Narasimhaiah, a well known Gandhian and a rationalist from Karnataka.
Sunday, June 21, 2020
Saturday, March 7, 2020
ಕುಣಿಗಲ್ ನ ಹೆಮ್ಮೆಯ ಕುದುರೆ ಫಾರಂ
ಬೆಂಗಳೂರಿನಿಂದ
70 ಕಿ.ಮೀ. ದೂರದಲ್ಲಿ ರಾಷ್ಟ್ರೀಯ
ಹೆದ್ದಾರಿ 48ಕ್ಕೆ ಹೊಂದಿಕೊಂಡಂತೆ ಕುಣಿಗಲ್
ಪಟ್ಟಣದ ಹೃದಯ ಭಾಗದಲ್ಲಿರುವ ಸ್ಟಡ್
ಫಾರ್ಮ್ ಭಾರತದ ಅತ್ಯಂತ ಹಳೆಯ
ಕುದುರೆ ಸಾಕಾಣಿಕಾ ಕೇಂದ್ರ. ದೇಶದಲ್ಲಿ 40 ಪ್ರಮುಖ
ಸ್ಟಡ್ ಫಾರ್ಮ್ಗಳಿದ್ದು, ಇದು
ಮೂರನೇ ಸ್ಥಾನದಲ್ಲಿದೆ. ಕುಣಿಗಲ್ನ ಸ್ಟಡ್
ಫಾರ್ಮ್ಗೆ ವಿದೇಶಗಳಿಂದಲೂ ಖರೀದಿಗೆ
ಬರುತ್ತಾರೆ. ಪಾರಂಪರಿಕ ತಾಣವಾಗಿರುವ ಈ ಕುದುರೆ ಫಾರಂ
ಕುಣಿಗಲ್ನ ಪ್ರಧಾನ ಆಕರ್ಷಣೆ
ಹಾಗೂ ಪ್ರತಿಷ್ಠೆಯ ಸಂಕೇತವಾಗಿದೆ.
ಇತಿಹಾಸ
‘ಮೈಸೂರು
ಹುಲಿ’ ಟಿಪ್ಪು ಸುಲ್ತಾನ್ ಸ್ಟಡ್
ಫಾರ್ಮ್ ನಿರ್ಮಾತೃ ಎಂದು ಇತಿಹಾಸ ಹೇಳುತ್ತದೆ.
ಟಿಪ್ಪು ತನ್ನ ಸೈನ್ಯಕ್ಕಾಗಿ ಅರೇಬಿಯನ್
ಕುದುರೆಗಳನ್ನು ಇಲ್ಲಿ ಸಾಕುತ್ತಿದ್ದ. ಮೈಸೂರು
ಸಾಮ್ರಾಜ್ಯವನ್ನು ಬ್ರಿಟಿಷರು ವಶಪಡಿಸಿಕೊಂಡ ನಂತರ ಸ್ಟಡ್ ಫಾರ್ಮ್
ಬ್ರಿಟಿಷರ ಅಧೀನಕ್ಕೆ ಬಂದಿತು. ಬ್ರಿಟಿಷರು ತಮ್ಮ
ಸೈನ್ಯಕ್ಕೆ ಬೇಕಾದ ಕುದುರೆಗಳನ್ನು ಸಾಕಲು
ಈ ಫಾರ್ಮನ್ನು ಬಳಸಿಕೊಂಡರು.
1850ರಲ್ಲಿ ಆಫ್ರಿಕ ತಳಿಗಳನ್ನು ತರಿಸಿದರು.
ಆ ಕಾಲದಲ್ಲಿ ಉಪಯೋಗಿಸಿದ
ಬೀಜದ ಕುದುರೆಗಳು ಮುಖ್ಯವಾಗಿ ಶುದ್ಧತಳಿ ಅಂದುಕೊಂಡಿದ್ದ ಅರಬ್ಬೀ ಮತ್ತು ವೇಲರ್
ಜಾತಿಯವು. 1886ರಲ್ಲಿ ವಿದೇಶದಿಂದ ‘ಪೆರೊ
ಗೊಮೆಜ್’ (Pero Gomez) ಎಂಬ
ಕುದುರೆಯನ್ನು ತರಿಸಲಾಯಿತು. ನಂತರ ಇಂಗ್ಲೆಂಡ್ ಹಾಗೂ
ಆಸ್ಟ್ರೇಲಿಯಾಗಳಿಂದ ಕುದುರೆಗಳನ್ನು ತರಿಸಲು ಆರಂಭಿಸಿದರು. 1936ರಲ್ಲಿ
ಜೆ.ಜೆ.ಮಲ್ಲಿಕ್ ಎಂಬ
ಬ್ರಿಟಿಷ್ ಅಧಿಕಾರಿ ಈ ಫಾರ್ಮನ್ನು
ಉತ್ತಮಗೊಳಿಸಲು ನಿಯಮಿತನಾದ. ಆತ ಸ್ಥಳೀಯ ಹೆಣ್ಣು
ಕುದುರೆಗಳನ್ನೆಲ್ಲ ವಿಸರ್ಜಿಸಿ ರೇಸ್ಗೆ ಬೇಕಾದ
ಕುದುರೆಗಳನ್ನು ಅಭಿವೃದ್ಧಿಪಡಿಸಿದ. ಇಲ್ಲಿ ಬೆಳೆಸಿದ ಕುದುರೆಗಳು
ಇಂಗ್ಲೆಂಡ್, ಆಸ್ತ್ರೇಲಿಯಾಗಳಿಂದ ತರಿಸಿದ ಕುದುರೆಗಳಿಗೆ ಪೈಪೋಟಿ
ನೀಡಿದವು. ವಿದೇಶಗಳಿಂದ ತರಿಸಿದ ಕುದುರೆಗಳಿಗೆ ಪೈಪೋಟಿ
ನೀಡಿದ ಮೊದಲ ಸ್ವದೇಶಿ ಕುದುರೆ
ಕುಣಿಗಲ್ ಫಾರ್ಮ್ನಲ್ಲಿ ಬೆಳೆಸಿದ
‘ವೆಟ್’ (Yvette) ಎಂಬ
ಕುದುರೆ. 1948ರಲ್ಲಿ ಈ ಫಾರ್ಮ್
ಮೈಸೂರು ಸರ್ಕಾರದ ವಶಕ್ಕೆ ಬಂದಿತು.
ಪಶುಪಾಲನಾ ಇಲಾಖೆಯ ಅಧೀನದಲ್ಲಿ ಬಂದ
ಅದರ ನಿರ್ವಹಣೆ ಕಷ್ಟವಾಯಿತು. ಲಾಭದ ಬದಲು ನಷ್ಟದ
ಹಾದಿ ಹಿಡಿಯಿತು. ಬೆಂಗಳೂರು ಟರ್ಫ್ ಕ್ಲಬ್ಗೆ
ಗುತ್ತಿಗೆ ನೀಡಲಾಯಿತಾದರೂ ನಿಭಾಯಿಸಲಾಗಲಿಲ್ಲ. ನಂತರ 1992ರಲ್ಲಿ ಜಾಗತಿಕ ಮಟ್ಟದಲ್ಲಿ
ಟೆಂಡರ್ ಕರೆಯಲಾಯಿತು. ಉದ್ಯಮಿ ವಿಜಯ ಮಲ್ಯ
ಒಡೆತನದ ಯುನೈಟೆಡ್ ರೇಸಿಂಗ್ ಅಂಡ್ ಬ್ಲಡ್
ಸ್ಟಾಕ್ ಬ್ರೀಡರ್ ಸಂಸ್ಥೆಗೆ 30 ವರ್ಷಗಳಿಗೆ
ಗುತ್ತಿಗೆ ನೀಡಲಾಗಿದೆ. ಈ ಸಂಸ್ಥೆ ಸರ್ಕಾರಕ್ಕೆ
ಪ್ರತಿವರ್ಷ 36 ಲಕ್ಷ ರೂ.ಗಳನ್ನು
ಬಾಡಿಗೆ ರೂಪದಲ್ಲಿ ನೀಡುತ್ತಿದೆ.
ವರ್ತಮಾನ
504 ಎಕರೆ
ವಿಸ್ತೀರ್ಣವನ್ನು ಹೊಂದಿದ್ದ ಕುದುರೆ ಫಾರ್ಮ್ 64 ಎಕರೆ
ಜಾಗವನ್ನು ಕೋರ್ಟ್, ಕೆ.ಎಸ್.ಆರ್.ಟಿ.ಸಿ.
ಬಸ್ ನಿಲ್ದಾಣ, ಪ್ರವಾಸಿ ಮಂದಿರ, ಪ್ರಥಮ
ದರ್ಜೆ ಕಾಲೇಜು ಮುಂತಾದ ಸೌಲಭ್ಯಗಳಿಗಾಗಿ
ಈಗಾಗಲೇ ಬಿಟ್ಟುಕೊಟ್ಟಿದೆ. ಈಗ ಇರುವ ಜಾಗವನ್ನು
ಬೇರೆ ಬೇರೆ ಅಳತೆಯ 25 ಪ್ಯಾಡಕ್(paddock)ಗಳಾಗಿ
ವಿಂಗಡಿಸಲಾಗಿದೆ. ಅಮೆರಿಕ, ಬ್ರಿಟನ್ ಹಾಗೂ
ಐರ್ಲ್ಯಾಂಡ್ ತಳಿಗಳನ್ನು ಇಲ್ಲಿ
ಸಾಕಲಾಗುತ್ತಿದೆ. ಪ್ರಸ್ತುತ
4 ಬೀಜದ ಕುದುರೆ, 166 ಮರಿಗಳು ಸೇರಿದಂತೆ 270 ಕುದುರೆಗಳು
ಇವೆ. ಇದರಲ್ಲಿ ಅರ್ಧದಷ್ಟು ಮರಿಗಳನ್ನು
ವಿಜಯ ಮಲ್ಯ ಅವರು ಸ್ವಂತ
ರೇಸ್ಗಾಗಿ ಇಟ್ಟುಕೊಳ್ಳುತ್ತಾರೆ. ಉಳಿದ
ಅರ್ಧದಷ್ಟು ಮರಿಗಳನ್ನು ಮಾರಾಟ ಮಾಡಲಾಗುತ್ತದೆ. ‘ಬೋಲ್ಡ್
ರಷ್ಯನ್’ (Bold Russian) ಎಂಬ
ವಿದೇಶದಿಂದ ತರಿಸಿದ ಕುದುರೆ ಅಮೆರಿಕ
ಹಾಗೂ ಇಂಗ್ಲೆಂಡ್ಗಳಲ್ಲಿ ನಡೆದ ಅನೇಕ
ರೇಸ್ಗಳಲ್ಲಿ ಗೆದ್ದಿದೆ. ಬ್ರೇವ್
ಆಕ್ಟ್ (Brave Act) ಹಾಗೂ
ತೇಜನೊ (Tejano) ವಿದೇಶದಿಂದ
ತರಿಸಿದ ಇತರ ಮುಖ್ಯ ಕುದುರೆಗಳು.
ಭಾರತದಲ್ಲೇ ಬೆಳೆಸಿದ ಆಡ್ಲರ್ ಎಂಬ
ಕುದುರೆ ಭಾಗವಹಿಸಿದ 9 ರೇಸ್ಗಳಲ್ಲೂ ಜಯ
ದಾಖಲಿಸಿದ ಹೆಗ್ಗಳಿಕೆ ಹೊಂದಿದೆ. ಈ ಕುದುರೆಗೆ ಅಮೆರಿಕದಲ್ಲಿ
ನಡೆದ ರೇಸ್ನಲ್ಲಿ ಗೆದ್ದ
ಭಾರತದಲ್ಲೇ ಬೆಳೆಸಲಾದ ಮೊದಲ ಕುದುರೆ ಎಂಬ
ಹೆಗ್ಗಳಿಕೆಯೂ ಇದೆ. ಲಿಟ್ಲ್ ಓವರ್
(Littleover), ಸ್ಟಾರ್ ಫೈರ್ ಗರ್ಲ್
(Starfire Girl), ಸೂಪರ್ ವೈಟ್ (Supervite)
ಎಂಬವು ರೇಸ್ಗಳಲ್ಲಿ ಗೆಲ್ಲುತ್ತಿರುವ
ಹೆಣ್ಣು ಕುದುರೆಗಳಾಗಿವೆ. ಇದೇ ಫಾರ್ಮ್ನಲ್ಲೇ
ಬೆಳೆಸಿದ ಸ್ಯಾಡ್ಡ್ಲ್ ಅಪ್ ಎಂಬ ಕುದುರೆ
ಭಾರತದಲ್ಲೇ ಅಲ್ಲದೆ ಸಿಂಗಾಪುರ ಮತ್ತು
ಮಲೇಷಿಯಾಗಳಲ್ಲೂ ಜಯ ದಾಖಲಿಸಿ ಆಲ್
ಏಷ್ಯನ್ ಚಾಂಪಿಯನ್ ಆಗಿದೆ. ‘ಬರ್ಡನ್ ಆಫ್
ಪ್ರೂಫ್’ (Burden of Proof) ಎಂಬ ಕುದುರೆಯ
ಅನೇಕ ಮರಿಗಳು ರೇಸ್ಗಳಲ್ಲಿ
ಗೆದ್ದಿವೆ. ‘ಬೆಂಗಳೂರು ರೇಸ್ ಸೀಸನ್’ ಸ್ಪರ್ಧೆಯಲ್ಲಿ
2006ರಲ್ಲಿ 31 ಹಾಗೂ 2007ರಲ್ಲಿ 39 ಗೆಲುವುಗಳನ್ನು ದಾಖಲಿಸುವ ಮೂಲಕ ಕುಣಿಗಲ್ ಸ್ಟಡ್
ಫಾರ್ಮ್ ‘ಲೀಡಿಂಗ್ ಸ್ಟಡ್ ಫಾರ್ಮ್’
ಪ್ರಶಸ್ತಿ ಪಡೆದಿದೆ.
ಲಭ್ಯವಿರುವ
ಸೌಲಭ್ಯಗಳು
ರೇಸ್
ಕುದುರೆಗಳು, ಗಂಡು ಕುದುರೆ, ಹೆಣ್ಣು
ಕುದುರೆಗಳಿಗೆ ಅಗತ್ಯಕ್ಕೆ ತಕ್ಕಂತೆ ಆಹಾರ ನೀಡಲಾಗುತ್ತದೆ.
ಹಸಿರು ಹುಲ್ಲಿನ ಜೊತೆಗೆ ಜೋಳ,
ಸೋಯಾ, ಬಾರ್ಲಿ, ಶಕ್ತಿ ಕೊಡುವ
ಇತರ ಆಹಾರವನ್ನು ಕೊಡಲಾಗುತ್ತದೆ. ಕುಣಿಗಲ್ ನೆಲ ಕುದುರೆಗಳ
ಸಾಕಾಣಿಕೆಗೆ ಸೂಕ್ತವಾಗಿದೆ. ಕುದುರೆಗಳು ಮೇಯಲು ಬೇಕಾದ ಹುಲ್ಲುಗಾವಲು
ಹಾಗೂ ಕುದುರೆಗಳ
ಆಹಾರಕ್ಕೆ ಬೇಕಾದ ಆಲ್ಫಾಲ್ಫಾ, ಗ್ರೀನ್
ಓಟ್ಸ್ ಹಾಗೂ ರೋಡ್ಸ್ ಗ್ರ್ಯಾಸ್
ಬೆಳೆಸಲಾಗಿದೆ. ಒಳ್ಳೆಯ ಗುಣಮಟ್ಟದ ಆಸ್ಟ್ರೇಲಿಯನ್
ಓಟ್ಸ್ ಅನ್ನು ಕುದುರೆಗಳ ಆಹಾರಕ್ಕಾಗಿ
ಆಮದು ಮಾಡಿಕೊಳ್ಳಲಾಗುತ್ತದೆ. ಕುದುರೆಗಳಿಗೆ ಬೇಕಾದ ಹಾಲು, ಮಜ್ಜಿಗೆಗಾಗಿ
ಹಸುಗಳನ್ನು ಸಾಕಲಾಗಿದೆ. ಕುದುರೆಗಳಿಗಾಗಿ ಶುದ್ಧವಾದ ಕಡಿಯುವ ನೀರನ್ನು ಒದಗಿಸಲು
ಫಿಲ್ಟರ್ ವ್ಯವಸ್ಥೆ ಇದೆ. ಕುದುರೆಗಳಿಗೆ ಪಶುವೈದ್ಯರ
ಸೌಲಭ್ಯ ಒದಗಿಸಲಾಗಿದ್ದು ಪಶುವೈದ್ಯರನ್ನು ರಾಷ್ಟ್ರಮಟ್ಟದಲ್ಲಿ ಆಯ್ಕೆ ಮಾಡಲಾಗುತ್ತದೆ. ಕುದುರೆಗಳಿಗೆ
ತರಬೇತಿ ನೀಡಲು ಕುದುರೆ ಸವಾರಿ
ತರಬೇತಿ ಶಾಲೆ ಇದೆ. 2007ರಲ್ಲಿ
3 ಕುದುರೆಗಳು ಓಡಲು ಅವಕಾಶವಿರುವ 7 ಫರ್ಲಾಂಗ್
ದೂರದ ಟ್ರ್ಯಾಕ್ ನಿರ್ಮಿಸಲಾಗಿದೆ. ಈ ಫಾರ್ಮ್ ನೂರಕ್ಕೂ
ಹೆಚ್ಚು ಜನರಿಗೆ ಉದ್ಯೋಗ ನೀಡಿದ್ದು
ಕೆಲಸ ಮಾಡುವ ಸಿಬ್ಬಂದಿಗಾಗಿ ವಸತಿ
ಗೃಹಗಳಿವೆ. ಸ್ಟಡ್ ಫಾರ್ಮ್ ಆವರಣದಲ್ಲಿ
ಮರದಿಂದ ನಿರ್ಮಿಸಲಾದ ಒಂದು ಭವ್ಯವಾದ ಗೆಸ್ಟ್
ಹೌಸ್ ಇದ್ದು ಅದು ಕೆಲವು
ವರ್ಷಗಳ ಹಿಂದೆ ಸಿಡಿಲಿನ ಆಘಾತಕ್ಕೆ
ಒಳಗಾಗಿ ನಾಶವಾಗಿತ್ತು. ನಂತರ ಅದನ್ನು ಮತ್ತೆ
ಯಥಾವತ್ತಾಗಿ ನಿರ್ಮಿಸಲಾಗಿದೆ. ಗೆಸ್ಟ್ ಹೌಸಿನ ಮುಂದೆ
ಒಂದು ಈಜುಕೊಳವಿದೆ. ಈ ಫಾರ್ಮಿನಲ್ಲಿ ಗಂಧದ
ಮರಗಳೂ ಸೇರಿದಂತೆ ಶತಮಾನದಷ್ಟು ಹಳೆಯದಾದ ಮರಗಳಿವೆ. ಇತ್ತೀಚೆಗೆ
ಈ ಸ್ಟಡ್ ಫಾರ್ಮ್
ಅನ್ನು ಕುಣಿಗಲ್ ಪಟ್ಟಣದ ಮೂಲಕ
ಹಾದುಹೋಗಿರುವ ಬೆಂಗಳೂರು-ಹಾಸನ ಬ್ರಾಡ್ಗೇಜ್
ರೈಲು ಮಾರ್ಗವು 60:40ರ ಅನುಪಾತದಲ್ಲಿ ಇಬ್ಭಾಗವಾಗಿಸಿದೆ.
-ತ.ನಂ. ಜ್ಞಾನೇಶ್ವರ, ಸಹಾಯಕ
ಪ್ರಾಧ್ಯಾಪಕರು, ಸರ್ಕಾರಿ ಪ್ರಥಮ ದರ್ಜೆ
ಕಾಲೇಜು, ಜಾಲಹಳ್ಳಿ, ದೇವದುರ್ಗ ತಾಲ್ಲೂಕು, ರಾಯಚೂರು ಜಿಲ್ಲೆ. ಪಿನ್:
584116 ಮೊ: 9164389346 ಈ-ಮೇಲ್: gnaneswaratn@gmail.com
Subscribe to:
Posts (Atom)