ನಾನು ಇತ್ತೀಚೆಗೆ
ಡಾ. ಹಾಲತಿ ಸೋಮಶೇಖರ್ ಅವರ ‘ಲಂಕೇಶ್ ಹೇಗಿದ್ದರು!?’ ಪುಸ್ತಕ ಓದಿದೆ. ಪುಸ್ತಕದ ಶೀರ್ಷಿಕೆಯು ಆಶ್ಚರ್ಯಸೂಚಕ
ಹಾಗೂ ಪ್ರಶ್ನಾರ್ಥಕ ಚಿಹ್ನೆಗಳೆರಡನ್ನೂ ಹೊಂದಿದೆ. ಪಿಎಚ್.ಡಿ. ಪದವಿಗಾಗಿ ಲಂಕೇಶ್ ಅವರ ಸಾಹಿತ್ಯದ
ಬಗ್ಗೆ ಅಧ್ಯಯನ ಮಾಡಿದ ಸೋಮಶೇಖರ್ ಅವರು ಲಂಕೇಶ್ ಅವರ ವ್ಯಕ್ತಿತ್ವದ ನಾನಾ ಬಣ್ಣಗಳನ್ನು ಕಂಡರು. ಲಂಕೇಶರ
ಬಗ್ಗೆ ಅವರನ್ನು ಬಲ್ಲವರು ಬರೆದಿರುವ ಮಾತುಗಳ ಜೊತೆಗೆ ಲಂಕೇಶ್ ಅವರೇ ಬರೆದುಕೊಂಡ ಮಾತುಗಳನ್ನೂ ಸೇರಿಸಿ
ಈ ಪುಸ್ತಕ ರಚಿಸಿದ್ದಾರೆ. ಇದಕ್ಕಾಗಿ ಅವರು 39 ಪತ್ರಿಕೆ, ಪುಸ್ತಕಗಳನ್ನು ಪರಾಮರ್ಶಿಸಿದ್ದಾರೆ. ಅಲ್ಲಲ್ಲೇ
ಅವುಗಳ ಉಲ್ಲೇಖಗಳನ್ನೂ ಕೊಟ್ಟಿದ್ದಾರೆ. ಹೀಗಾಗಿ ಈ ಕೃತಿಗೆ ಒಂದು ಅಧಿಕೃತತೆ ಬಂದಿದೆ. ಕನ್ನಡದಲ್ಲಿ
ಇದು ಈ ಬಗೆಯ ಮೊದಲ ಕೃತಿ.
ಈ ಕೃತಿಯು ‘ಲಂಕೇಶ್
– ಹೀಗಿದ್ದರು!’, ‘ಲಂಕೇಶ್ – ಹೀಗೂ ಇದ್ದರು!!’, ‘ಲಂಕೇಶ್ – ಹೀಗಿದ್ದರೆ?’, ‘ಲಂಕೇಶ್ – ಹೀಗಿರಲಿಲ್ಲ!’
ಹಾಗೂ ‘ಸಾರ್ವಕಾಲಿಕ ಲಂಕೇಶ್: ಸಮಕಾಲೀನರೊಂದಿಗೆ’ ಎಂಬ ನಾಲ್ಕು ಭಾಗಗಳಲ್ಲಿ ಹರಡಿಕೊಂಡಿದ್ದು ಎರಡು
ಅನುಬಂಧಗಳನ್ನೂ ಒಳಗೊಂಡಿದೆ. ಲಂಕೇಶ್ ಸಮಕಾಲೀನರಾದ ಚಂದ್ರಶೇಖರ ಪಾಟೀಲರು ಮುನ್ನುಡಿ ಬರೆದಿದ್ದಾರೆ.
ಪುಸ್ತಕವು ಲಂಕೇಶ್
ಅವರ ವರ್ಣರಂಜಿತ ಸಂಕೀರ್ಣ ವ್ಯಕ್ತಿತ್ವವನ್ನು ಬಿಚ್ಚಿಟ್ಟಿದೆ. ಕೃತಿಯನ್ನು ಓದುವಾಗ ಇಂಗ್ಲಿಷ್ ಕವಿಯೊಬ್ಬನ
ಬಗ್ಗೆ ಓದಿದಂತೆ ಭಾಸವಾಗುತ್ತದೆ. ಕನ್ನಡದ ಪರಿಸರದಲ್ಲಿ ಇಷ್ಟು ವರ್ಣರಂಜಿತ ವ್ಯಕ್ತಿತ್ವದ ಇನ್ನೊಬ್ಬ
ಸಾಹಿತಿಯನ್ನು ಕಾಣುವುದು ಸಾಧ್ಯವಿಲ್ಲ. ಲಂಕೇಶ್ ಅವರ ಭ್ರಮೆಗಳು, ತಿಕ್ಕಲುತನಗಳು, ಒರಟುತನ, ಅಸೂಯೆ,
ಅಹಂಕಾರ, ಕೋಪ, ಪ್ರಾಮಾಣಿಕತೆ, ಸಹಲೇಖಕರೊಂದಿಗಿನ ಅವರ ರಾಗದ್ವೇಷಗಳು ಇವನ್ನೆಲ್ಲ ರಂಜಕವಾಗಿ ನಿರೂಪಿಸಿದ್ದಾರೆ
ಹಾಲತಿ ಸೋಮಶೇಖರ್. ಲಂಕೇಶ್ ಅವರ ದ್ವಂದ್ವ ವ್ಯಕ್ತಿತ್ವವನ್ನು ಈ ಕೃತಿ ಅನಾವರಣಗೊಳಿಸಿದೆ.
“ಲಂಕೇಶ್ ಒರಟು ನಡೆಯ
ಹಿಂದಿನ ಪ್ರಾಮಾಣಿಕತೆಯನ್ನು ಗುರುತಿಸುವ ಕೆಲಸವನ್ನು” ಹಾಲತಿ ಸೋಮಶೇಖರ್ ಮಾಡಿದ್ದಾರೆಂದು ಎಸ್.ಜಿ.
ಸಿದ್ಧರಾಮಯ್ಯನವರು ನುಡಿಯುತ್ತಾರೆ. “ಲಂಕೇಶ್ ಬಗ್ಗೆ ಎಲ್ಲಾ ವಿಧದ ಪ್ರೀತಿ ಗೌರವಗಳನ್ನು ಇಟ್ಟುಕೊಂಡು
ಅವರ ಮೇಲೆ ಅಷ್ಟೇ ನಿರ್ಮಮಕಾರವನ್ನು ತಾಳಿರುವುದರಿಂದ ಹಾಲತಿ ಅವರ ವಸ್ತುನಿಷ್ಠತೆ ಮೇಲುಗೈ ಸಾಧಿಸಿದೆ”
ಎಂದು ಪ್ರೊ. ಕೆ. ಎಸ್. ಭಗವಾನ್ ಹೇಳುತ್ತಾರೆ. ಪ್ರಾಸಂಗಿಕವಾಗಿ ಬಂದ ಈ ಕೃತಿಯನ್ನು ಸ್ವಾಗತಿಸಿದ
ಪ್ರೊ. ಎಂ. ಕೃಷ್ಣೇಗೌಡರು “ಸಾಹಿತಿಗಳ ಕಪ್ಪು ಬಿಳಿ ಮುಖಗಳನ್ನು ಅನಾವರಣ ಮಾಡುವುದರಲ್ಲೇ ಸೋಮಶೇಖರ್
ಅವರ ಸಮಯ, ಶಕ್ತಿ, ಪ್ರತಿಭೆ ವ್ಯಯವಾಗಬಾರದು” ಎಂಬ ಎಚ್ಚರಿಕೆಯನ್ನೂ ಕೊಡುತ್ತಾರೆ.
2015ರಲ್ಲಿ ಮೊದಲ
ಮುದ್ರಣ ಕಂಡಿರುವ ಈ ಕೃತಿಯನ್ನು ಮೈಸೂರಿನ ವಿಸ್ಮಯ ಪ್ರಕಾಶನ ಪ್ರಕಟಿಸಿದೆ. 147+xx ಪುಟಗಳ ಈ ಕೃತಿಯ
ಬೆಲೆ 160 ರೂಪಾಯಿಗಳು. ಮುಖಪುಟ ಅಷ್ಟೊಂದು ಆಕರ್ಷಕವಾಗಿಲ್ಲ.
- ತ. ನಂ. ಜ್ಞಾನೇಶ್ವರ