Saturday, November 28, 2015

ಕನಕದಾಸರು

ಕನಕದಾಸರು ಹದಿನಾರನೇ ಶತಮಾನದಲ್ಲಿ ಬದುಕಿದ್ದ ಕೀರ್ತನಕಾರ, ಕವಿ ಹಾಗೂ ಹರಿದಾಸರು. ಶೂದ್ರವರ್ಗದಿಂದ ಬಂದ ಏಕೈಕ ಹರಿದಾಸರು.  ವ್ಯಾಸರಾಯರ ಶಿಷ್ಯರಾಗಿದ್ದ ಅವರು ಸುಮಾರು ನಾಲ್ಕುನೂರು ಕೀರ್ತನೆಗಳನ್ನೂ, ಐದು ಕಾವ್ಯಗಳನ್ನೂ ರಚಿಸಿರುವರು. ಅವರ ಕೀರ್ತನೆಗಳ ಅಂಕಿತ 'ಕಾಗಿನೆಲೆಯಾದಿಕೇಶವರಾಯ'. ಅವರು ರಚಿಸಿರುವ ಕಾವ್ಯಗಳೆಂದರೆ:
  1. ನಳಚರಿತ್ರೆ
  2. ಮೋಹನತರಂಗಿಣಿ
  3. ರಾಮಧಾನ್ಯಚರಿತೆ
  4. ಹರಿಭಕ್ತಿಸಾರ
  5. ನೃಸಿಂಹಸ್ತವ
ನಳಚರಿತ್ರೆ
ನಳಚರಿತ್ರೆಯು ನಳ ದಮಯಂತಿಯರ ಕಥೆಯನ್ನು ಹೊಂದಿದೆ.
ಮೋಹನತರಂಗಿಣಿ
ಮೋಹನತರಂಗಿಣಿಯು ಶಂಬರಾಸುರ ಹಾಗೂ ಬಾಣಾಸುರರ ಕಥೆಯನ್ನು ಹೊಂದಿದೆ. ಎರಡು ಕಥೆಗಳನ್ನು ಒಂದೇ ಕಾವ್ಯದಲ್ಲಿ ಹೇಳಿರುವುದು ವಿಶೇಷ.
ರಾಮಧಾನ್ಯಚರಿತೆ
 ಜಗಳ ಮಾಡಿಕೊಂಡ ರಾಗಿ ಮತ್ತು ಅಕ್ಕಿ ನ್ಯಾಯಕ್ಕಾಗಿ ರಾಮನ ಬಳಿ ಬರುತ್ತವೆ. ರಾಮ ಇಬ್ಬರನ್ನೂ ಸೆರೆಗೆ ತಳ್ಳುತ್ತಾನೆ. ಸ್ವಲ್ಪ ಕಾಲದ ನಂತರ ರಾಗಿ ಆರೋಗ್ಯವಾಗಿದ್ದರೆ, ಅಕ್ಕಿ ಮುಗ್ಗಿರುತ್ತದೆ. ಆರೋಗ್ಯವಾಗಿದ್ದ ರಾಗಿ 'ರಾಮಧಾನ್ಯ' ಎನಿಸಿಕೊಳ್ಳುತ್ತದೆ. ಇಲ್ಲಿ ರಾಗಿ ಬಡವರ ಪ್ರತಿನಿಧಿಯಾಗಿಯೂ, ಅಕ್ಕಿ ಶ್ರೀಮಂತರ ಪ್ರತಿನಿಧಿಯಾಗಿಯೂ ಬಂದಿದೆ.
ಹರಿಭಕ್ತಿಸಾರ
ಇದೊಂದು ಶತಕ. 110 ಪದ್ಯಗಳಿವೆ. ಭಾಮಿನೀ ಷಟ್ಪದಿಯಲ್ಲಿರುವ ಈ ಪದ್ಯಗಳು 'ರಕ್ಷಿಸು ನಮ್ಮನನವರತ' ೆಂದು ಕೊನೆಗೊಳ್ಳುತ್ತವೆ.
ನೃಸಿಂಹಸ್ತವ
ಈ ಕೃತಿ ಉಪಲಬ್ಧವಿಲ್ಲ.
 ಕನಕದಾಸ ಜಯಂತಿ
ಕರ್ನಾಟಕ ಸರ್ಕಾರವು 2008ರಿಂದ 'ಕನಕದಾಸ ಜಯಂತಿ' ಆಚರಿಸುತ್ತಿದೆ.
ಪ್ರಶಸ್ತಿ
ಕರ್ನಾಟಕ ಸರ್ಕಾರವು ಪ್ರತಿವರ್ಷ 'ಕನಕಶ್ರೀ' ಪ್ರಶಸ್ತಿ ನೀಡುತ್ತಿದೆ.

Saturday, April 11, 2015

ನೀವು ಓದಲೇಬೇಕಾದ ಕನ್ನಡ ಕೃತಿಗಳು

  1. ಶ್ರೀರಾಮಾಯಣದರ್ಶನಂ - ಕುವೆಂಪು
  2. ಶೂದ್ರ ತಪಸ್ವಿ - ಕುವೆಂಪು 
  3. ಕಾನೂರು ಹೆಗ್ಗಡತಿ - ಕುವೆಂಪು
  4. ವಿಭೂತಿ ಪೂಜೆ - ಕುವೆಂಪು
  5. ಮಂಕುತಿಮ್ಮನ ಕಗ್ಗ - ಡಿವಿಜಿ
  6. ಮರುಳಮುನಿಯನ ಕಗ್ಗ - ಡಿವಿಜಿ
  7. ಜ್ಞಾಪಕ ಚಿತ್ರಶಾಲೆ - ಡಿವಿಜಿ
  8. ಸ್ವಾಮಿ ವಿವೇಕಾನಂದ - ಕುವೆಂಪು 
  9. ರಾಮಕೃಷ್ಣ ಪರಮಹಂಸ - ಕುವೆಂಪು 
  10. ಮೂಕಜ್ಜಿಯ ಕನಸುಗಳು - ಶಿವರಾಮ ಕಾರಂತ 
  11. ಪರಿಸರದ ಕಥೆ - ಪೂರ್ಣಚಂದ್ರ ತೇಜಸ್ವಿ 
  12. ಹಸುರು ಹೊನ್ನು - ಬಿ ಜಿ ಎಲ್ ಸ್ವಾಮಿ
  13. ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕಾ - ಬಿ ಜಿ ಎಲ್ ಸ್ವಾಮಿ
  14. ನನ್ನ ಗೋಪಾಲ - ಕುವೆಂಪು 
  15. ಬೊಮ್ಮನಹಳ್ಳಿಯ ಕಿಂದರಿಜೋಗಿ - ಕುವೆಂಪು 
  16. ಕರ್ವಾಲೋ -  ಪೂರ್ಣಚಂದ್ರ ತೇಜಸ್ವಿ 
  17. ಮಿಲನಿಯಂ ಸರಣಿ - ಪೂರ್ಣಚಂದ್ರ ತೇಜಸ್ವಿ
  18. ಬದುಕಲು ಕಲಿಯಿರಿ - ಸ್ವಾಮಿ ಜಗದಾತ್ಮಾನಂದ 
  19. ಸ್ವಾಮಿ ವಿವೇಕಾನಂದರ ಸಮಗ್ರ ಜೀವನ ಚರಿತೆ - ಸ್ವಾಮಿ ಪುರುಷೋತ್ತಮಾನಂದ 
  20. ಯುಗಾವತಾರ ಶ್ರೀ ರಾಮಕೃಷ್ಣ - ಸ್ವಾಮಿ ಪುರುಷೋತ್ತಮಾನಂದ 
  21. ಶ್ರೀ ಶಾರದಾದೇವೀ ಜೀವನಗಂಗಾ  - ಸ್ವಾಮಿ ಪುರುಷೋತ್ತಮಾನಂದ 
  22. ರಾಮಕೃಷ್ಣ ವಚನವೇದ - ಮಹೇಂದ್ರನಾಥ ಗುಪ್ತ 
  23. ಸ್ವಾಮಿ ವಿವೇಕಾನಂದರ ಕೃತಿಶ್ರೇಣಿ
  24. ತಲೆದಂಡ - ಗಿರೀಶ್ ಕಾರ್ನಾಡ್
  25. ಸಂಕ್ರಾಂತಿ - ಪಿ ಲಂಕೇಶ್
  26. ಗುಣಮುಖ - ಪಿ ಲಂಕೇಶ್
  27. ವಚನ ಭಾರತ - ಎ ಆರ್ ಕೃಷ್ಣಶಾಸ್ತ್ರೀ
  28. ಡುಂಢಿ - ಯೋಗೇಶ್ ಮಾಸ್ಟರ್
  29. ಜನಪ್ರಿಯ ವಾಲ್ಮೀಕಿ ರಾಮಾಯಣ - ಕುವೆಂಪು
  30. ರಾಮಾಯಣ ವಿಷವೃಕ್ಷ - ಬಂಜಗೆರೆ ಜಯಪ್ರಕಾಶ್
  31. ರಾಮನಿಗೆ ಸೀತೆ ಏನಾಗಬೇಕು - ಡಾ. ಆರುದ್ರ
  32. ಇತಿಹಾಸದ ಕಣ್ಣಲ್ಲಿ ರಾಮಾಯಣ - ಎಚ್ ಡಿ ಸಂಕಾಲಿಯಾ
  33. ವಾಲ್ಮೀಕಿ ತೂಕಡಿಸಿದಾಗ - ಗೌರೀಶ ಕಾಯ್ಕಿಣಿ
  34. ದೇವರು - ಎ.ಎನ್. ಮೂರ್ತಿರಾವ್
  35. ಶಂಕರಾಚಾರ್ಯ ಮತ್ತು ಪ್ರತಿಗಾಮಿತನ - ಕೆ ಎಸ್ ಭಗವಾನ್
  36. ವಿವೇಕಾನಂದರ ಕ್ರಾಂತಿಕಾರಿ ವಿಚಾರಗಳು - ಜ ಹೊ ನಾರಾಯಣಸ್ವಾಮಿ
  37. ದಾಂಪತ್ಯ ದೀಪಿಕೆ - ಅನುಪಮಾ ನಿರಂಜನ
  38. ಕೇಳು ಕಿಶೋರಿ - ಅನುಪಮಾ ನಿರಂಜನ
  39. ವಧುವಿಗೆ ಕಿವಿಮಾತು - ಅನುಪಮಾ ನಿರಂಜನ
  40.  ತಾಯಿ ಮಗು - ಅನುಪಮಾ ನಿರಂಜನ
  41. ದಿ ಲಾಸ್ಟ್ ಲೆಕ್ಚರ್ - ರ್ಯಾಂಡಿ  ಪಾಶ್ (ಅನು: ಎಸ್. ಉಮೇಶ್)

Thursday, January 1, 2015

ಮಾತೇ ಮುತ್ತು

ಮಾತು ಬೆಳ್ಳಿ; ಮೌನ ಬಂಗಾರ.
ಮಾತು ಮನೆ ಕೆಡಿಸಿತು; ತೂತು  ಒಲೆ ಕೆಡಿಸಿತು.
ಮಾತು ಆಡಿದರೆ ಹೋಯಿತು; ಮುತ್ತು ಒಡೆದರೆ ಹೋಯಿತು.
ಮಾತೇ ಮುತ್ತು; ಮಾತೇ ಮೃತ್ಯು.
ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು
ನುಡಿ ಜ್ಯೋತಿರ್ಲಿಂಗ
ಮೌನ ಮೊಗ್ಗೆಯನೊಡೆದು ಮಾತರಳಿ ಬರಲಿ
ಮೃದುವಚನ ಮೂಲೋಕ ಗೆಲ್ಲುವುದು ಗೆಳೆಯಾ
ಮೃದುವಚನವೇ ಸಕಲ ಜಪಂಗಳಯ್ಯಾ
ಮೃದುವಚನವೇ ಸಕಲ ತಪಂಗಳಯ್ಯಾ
ರಸಿಕನಾಡಿದ ಮಾತು ಶಶಿಯುದಿಸಿ ಬಂದಂತೆ
ರಸಿಕನಲ್ಲದವನ ಬರಿಮಾತು ಕೂರ್ದಸಿಯ ಬಡಿದಂತೆ
ಮಾತು ಮಾತು ಮಥಿಸಿ ಬಂದ ನಾದದ ನವನೀತ

Thursday, November 6, 2014

ಕುಲಕುಲಕುಲವೆಂದು ಹೊಡೆದಾಡದಿರಿ

ಕುಲಕುಲಕುಲವೆಂದು ಹೊಡೆದಾಡದಿರಿ
ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಬಲ್ಲಿರಾ

ಹುಟ್ಟದ ಯೋನಿಗಳಿಲ್ಲ ಮೆಟ್ಟದ ಭೂಮಿಗಳಿಲ್ಲ
ಅಟ್ಟು ಉಣ್ಣದ ವಸ್ತುಗಳಿಲ್ಲ
ಗುಟ್ಟು ಕಾಣಿಸಬಂತು ಹಿರಿದೇನು ಕಿರಿದೇನು
ನೆಟ್ಟನೆ ಸರ್ವಜ್ಞನ ನೆಲೆ ಕಂಡ್ಯ ಮನುಜ

ಜಲವೆ ಸಕಲ ಕುಲಕ್ಕೆ ತಾಯಲ್ಲವೆ
ಜಲದ ಕುಲವನೇನಾದರೂ ಬಲ್ಲಿರಾ
ಜಲದ ಬೊಬ್ಬುಳಿಯಂತೆ ಸ್ಥಿರವಲ್ಲವೀ ದೇಹ
ನೆಲೆಯ ಅರಿತು ನೀ ನೆನೆ ಕಂಡ್ಯ ಮನುಜ

ಹರಿಯೇ ಸರ್ವೋತ್ತಮ ಹರಿಯೇ ಸರ್ವೇಶ್ವರ
ಹರಿಮಯವೆಲ್ಲವೆನುತ ತಿಳಿದು
ಸಿರಿಕಾಗಿನೆಲೆಯಾದಿಕೇಶವರಾಯನ
ಚರಣಕಮಲವ ಕೀರ್ತಿಸುವನೆ ಕುಲಜ

- ಕನಕದಾಸರು 

Saturday, July 12, 2014

ಗೊರೂರು ರಾಮಸ್ವಾಮಿ ಅಯ್ಯಂಗಾರ್

ಪತ್ನಿ ಶೇಷಮ್ಮ ಅವರೊಂದಿಗೆ ಗೊರೂರು ರಾಮಸ್ವಾಮಿ ಅಯ್ಯಂಗಾರ್
ಕನ್ನಡದ ಪ್ರಮುಖ ಸಾಹಿತಿಗಳಲ್ಲಿ ಒಬ್ಬರಾದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಹಾಸನ ಜಿಲ್ಲೆಯ ಗೊರೂರಿನಲ್ಲಿ1904ರಲ್ಲಿ ಜನಿಸಿದರು. ತಂದೆ ಶ್ರೀನಿವಾಸ ಅಯ್ಯಂಗಾರ್; ತಾಯಿ ಲಕ್ಷ್ಮಮ್ಮ. ಅವರು ಎಂ.ಎ. ಪರೀಕ್ಷೆ ತೆಗೆದುಕೊಂಡಾಗ ಅವರೇ ರಚಿಸಿದ 'ನಮ್ಮ ಊರಿನ ರಸಿಕರು' ಕೃತಿ ಪಠ್ಯವಾಗಿತ್ತು. ಮಹಾತ್ಮ ಗಾಂಧೀಜಿಯವರ ಆತ್ಮಕಥೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. 'ಅಮೆರಿಕದಲ್ಲಿ ಗೊರೂರು' ಅವರ ಪ್ರವಾಸಕಥನ. ಲಲಿತ ಪ್ರಬಂಧಗಳನ್ನೂ ಬರೆದಿದ್ದಾರೆ. 60ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

Thursday, June 26, 2014

ವಾಲ್ಮೀಕಿ ಯಾರು?

ಪಟಿಯಾಲಾದಲ್ಲಿರುವ ಪಂಜಾಬ್ ಯೂನಿವರ್ಸಿಟಿಯ ವಾಲ್ಮೀಕಿ ಅಧ್ಯಯನ ಪೀಠದ ಚೇರ್‍ಮ್ಯಾನ್ ಆಗಿರುವ ಡಾ. ಮಂಜುಳಾ ಸಹದೇವ್ ಹೈಕೋರ್ಟ್‍ನ ಮುಂದೆ ಮಂಡಿಸಿದ ಅಂಶಗಳು ಹೀಗಿವೆ.

  • ಕ್ರಿ.ಶ. 9ನೇ ಶತಮಾನದವರೆಗಿನ ಯಾವುದೇ ವೈದಿಕ ಸಾಹಿತ್ಯದಲ್ಲೂ ಮಹರ್ಷಿ ವಾಲ್ಮೀಕಿಯವರು, 'ದರೋಡೆಕೋರ, ಡಕಾಯಿತ'ನಾಗಿದ್ದ ಎಂಬ ಉಲ್ಲೇಖ ಇಲ್ಲವೇ ಇಲ್ಲ.
  • ಕ್ರಿ.ಶ. 9ನೇ ಶತಮಾನದವರೆಗೆ 'ವಾಲ್ಮೀಕಿ' ಎಂಬ ಶಬ್ದದ ವ್ಯತ್ಪತ್ತಿ  (ವಲ್ಮೀಕ ಅಂದರೆ ಹುತ್ತದಿಂದ ಬಂದವ ಎಂಬ ಅರ್ಥ) ಎಲ್ಲೂ ಸಿಗುವುದಿಲ್ಲ.
  • ತನ್ನದೇ ಕೃತಿ 'ರಾಮಾಯಣ'ದಲ್ಲಿ ಆತ ಋಷಿ, ಮಹಾಋಷಿ ಭಗವಾನ್, ಮುನಿ ಅಂತ ಕರೆಸಿಕೊಳ್ಳುತ್ತಾನೆಯೇ ಹೊರತು, ಅಲ್ಲಿ ಢಕಾಯಿತ ಎಂಬ ಪ್ರಸಕ್ತಿಯೇ ಇಲ್ಲ.
  • ವಾಲ್ಮೀಕಿ ಬೇಡ, ವ್ಯಾಧ, ದರೋಡೆಕೋರನಾಗಿದ್ದ ಎಂಬ ಪ್ರಸ್ತಾಪವು ನಮಗೆ ಮೊದಲು ಸಿಗುವುದು 'ಸ್ಕಂಧಪುರಾಣ'ದಲ್ಲಿ. ಇದರ ಕಾಲಮಾನ ಅಂದಾಜು ಕ್ರಿ.ಶ. 10ನೇ ಶತಮಾನ.
  • "ಮರಾ ಮರಾ" ಎಂಬ ಮಂತ್ರದ ಬಗ್ಗೆ ಮೊತ್ತಮೊದಲ ಬಾರಿ ಹೇಳಲಾಗಿರುವುದು 'ಅಧ್ಯಾತ್ಮ ರಾಮಾಯಣ'ದಲ್ಲಿ (ಅಯೋಧ್ಯಾಕಾಂಡ-6.80-81). ಇದು ಕ್ರಿ.ಶ. 15ನೇ ಶತಮಾನದ್ದು.
  • ಅದೇ ರೀತಿ ಈ "ಮರಾ ಮರಾ" ಮಂತ್ರವು 'ಆನಂದ ರಾಮಾಯಣ'(ರಾಜ್ಯಕಾಂಡ-14.141)ದಲ್ಲಿ ಕಂಡುಬರುತ್ತದೆ. ಈ ಗ್ರಂಥದ ಕಾಲಮಾನ ಕ್ರಿ.ಶ. 16ನೇ ಶತಮಾನ.
- ಡಾ. ಅನಸೂಯ ಕೆಂಪನಹಳ್ಳಿ, 'ನಾಯಕ ಮಿತ್ರ', ಜೂನ್ 20 - ಜುಲೈ 05, 2014

Friday, April 4, 2014

ಹಳ್ಳಿ ಹಕ್ಕಿಯ ಹಾಡು


ಮಾಜಿ ಸಚಿವ ಎಚ್ ವಿಶ್ವನಾಥ್ ಅವರ ಆತ್ಮಕಥನ 'ಹಳ್ಳಿ ಹಕ್ಕಿಯ ಹಾಡು' ಓದಿದೆ.  ಈ ಕೃತಿ ಮಾಮೂಲಿ ಆತ್ಮಕತೆಯಾಗಿರದೆ, ಸಂವೇದನಾಶೀಲ ರಾಜಕಾರಣಿಯೊಬ್ಬನ ಸ್ವಗತದಂತಿದೆ. ವಿಶ್ವನಾಥ್ ಅವರು ವೈಯಕ್ತಿಕ ವಿಚಾರಗಳನ್ನು ಹೆಚ್ಚಾಗಿ ವಿವರಿಸದೆ ತಮ್ಮ ಸಾರ್ವಜನಿಕ ಜೀವನದ ಅನುಭವಗಳನ್ನು ದಾಖಲಿಸಿದ್ದಾರೆ. ಪುಸ್ತಕವು ಸ್ವಾರಸ್ಯಕರವಾಗಿದ್ದು ಸುಲಲಿತವಾಗಿದೆ.  ಅಲ್ಲಲ್ಲಿ ಡಿವಿಜಿಯವರ ಮಂಕುತಿಮ್ಮನ ಕಗ್ಗ, ಮರುಳ ಮುನಿಯನ ಕಗ್ಗ ಹಾಗೂ ಉಮರನ ಒಸಗೆಗಳಿಂದ ಆಯ್ದ ಪದ್ಯಗಳನ್ನು ಸಂದರ್ಭೋಚಿತವಾಗಿ ಉದಾಹರಿಸುತ್ತಾರೆ.
180 ಪುಟಗಳ ಈ ಪುಸ್ತಕವನ್ನು ಅಂಕಿತ ಪುಸ್ತಕ ಪ್ರಕಟಿಸಿದೆ. 2007ರಲ್ಲಿ ಪ್ರಕಟವಾಗಿರುವ ಈ ಕೃತಿಯ ಬೆಲೆ ರೂ. 125.