Saturday, April 9, 2016

ವಿವೇಕಾನಂದರ ಕ್ರಾಂತಿಕಾರಿ ವಿಚಾರಗಳು




ನಾನು ಇತ್ತೀಚೆಗೆ ಜ ಹೊ ನಾರಾಯಣಸ್ವಾಮಿಯವರ ‘ವಿವೇಕಾನಂದರ ಕ್ರಾಂತಿಕಾರಿ ವಿಚಾರಗಳು’ ಕೃತಿಯನ್ನು ಓದಿದೆ. ಜ ಹೊ ನಾರಾಯಣಸ್ವಾಮಿಯವರು ಸ್ವಾಮಿ ವಿವೇಕಾನಂದರ ‘ಕ್ರಾಂತಿಕಾರಿ’ ವಿಚಾರಗಳನ್ನು ಮೈಸೂರಿನ ಶ್ರೀ ರಾಮಕೃಷ್ಣಾಶ್ರಮವು 1974ರಲ್ಲಿ ಹತ್ತು ಸಂಪುಟಗಳಲ್ಲಿ ಪ್ರಕಟಿಸಿರುವ ‘ಸ್ವಾಮಿ ವಿವೇಕಾನಂದರ ಕೃತಿಶ್ರೇಣಿ’ಯಿಂದ ಆಯ್ದು ವಿವಿಧ ಶೀರ್ಷಿಕೆಗಳಡಿ ವಿಂಗಡಿಸಿಕೊಟ್ಟಿದ್ದಾರೆ. ಪ್ರತಿ ಉಲ್ಲೇಖವು ಯಾವ ಸಂಪುಟದ ಯಾವ ಪುಟದಲ್ಲಿದೆ ಎಂಬ ವಿವರವನ್ನು ಪುಸ್ತಕದ ಕೊನೆಯಲ್ಲಿ ನೀಡಿದ್ದಾರೆ. ಕೃತಿಯ ಆರಂಭದಲ್ಲಿ ಖ್ಯಾತ ವಿಮರ್ಶಕ ಪ್ರೊ.ಕೆ.ಎಸ್.ಭಗವಾನ್ ಅವರ ‘ಸ್ವಾಮಿ ವಿವೇಕಾನಂದ: ಶಕ್ತಿಯ ಸಂಕೇತ’ ಎಂಬ ಬರೆಹವಿದೆ. ನಾಲ್ಕನೆಯ ಮುದ್ರಣದಲ್ಲಿ ‘ಪೀಠಿಕೆ’ ಹಾಗೂ ‘ಸಂಕ್ಷಿಪ್ತ ಜೀವನ’ ಸೇರ್ಪಡೆಗೊಂಡಿವೆ. 1986ರಲ್ಲಿ ಮೊದಲ ಬಾರಿಗೆ ಪ್ರಕಟವಾಗಿರುವ ಈ ಕೃತಿ 2015ರಲ್ಲಿ ಆರನೆಯ ಮುದ್ರಣ ಕಂಡಿದೆ. “ವಿವೇಕಾನಂದರ ಕ್ರಾಂತಿಕಾರಿ ವಿಚಾರಗಳನ್ನು ಯುವಜನರು, ಹಿರಿಯರು ಹಳ್ಳಿಹಳ್ಳಿಗೂ ಮೂಲೆಮೂಲೆಗೂ ತಲುಪಿಸಬೇಕೆಂದು ಅವರಲ್ಲಿ ನನ್ನ ಕಳಕಳಿಯ ಪ್ರಾರ್ಥನೆ” ಎಂದು ಕುವೆಂಪು ಅವರು ತಮ್ಮ ‘ಹಾರೈಕೆ’ಯಲ್ಲಿ ತಿಳಿಸಿದ್ದಾರೆ. “ಯಾರ ದೇಹದ ದುಡಿತದಿಂದ ಮಾತ್ರ ಬ್ರಾಹ್ಮಣರ ಕೀರ್ತಿ, ಕ್ಷತ್ರಿಯರ ಪ್ರಾಬಲ್ಯ, ವೈಶ್ಯರ ಐಶ್ವರ್ಯ ಸಾಧ್ಯವಾಯಿತೊ ಅವರು ಎಲ್ಲಿ ಇರುವರು?” (ಪುಟ 37) ಎಂದು ವಿವೇಕಾನಂದರು ಪ್ರಶ್ನಿಸುತ್ತಾರೆ. “ಶೂದ್ರರು ಕೇವಲ ತಮ್ಮ ತಮ್ಮ ಶೂದ್ರತ್ವದಿಂದಲೇ ಮೇಲೇಳುವ ಒಂದು ಕಾಲ ಬರುವುದು” (ಪುಟ 39) ಎಂದು ಭವಿಷ್ಯ ನುಡಿಯುತ್ತಾರೆ. “ಪೌರೋಹಿತ್ಯವೇ ಭರತಖಂಡದ ವಿನಾಶಕ್ಕೆ ಕಾರಣ” (ಪುಟ 40) ಎಂದು ಘೋಷಿಸುತ್ತಾರೆ. “ಜನಸಾಮಾನ್ಯರನ್ನು ವಿದ್ಯಾವಂತರನ್ನಾಗಿ ಮಾಡಬೇಕು” (ಪುಟ 41) ಎಂದು ಸಲಹೆ ನೀಡುತ್ತಾರೆ. “ಇಷ್ಟೊಂದು ಮಂದಿ ಭಿಕ್ಷುಕರಿರುವ ಜನಾಂಗ ಪ್ರಪಂಚದಲ್ಲಿ ಮತ್ತೆಲ್ಲಿಯೂ ಇಲ್ಲ” (ಪುಟ 43) ಎಂದು ವಿಷಾದದಿಂದ ನುಡಿಯುತ್ತಾರೆ.“ ಉಪನಿಷತ್ತಿನ ತತ್ತವೆಲ್ಲ ರಾಜರ ಬುದ್ಧಿಯಿಂದ ಬಂದುದು, ಬ್ರಾಹ್ಮಣನಿಂದಲ್ಲ” (ಪುಟ 54) ಎಂದು ಹೇಳುತ್ತಾರೆ. “ವೇದಾಂತದ ಮಿದುಳು ಇಸ್ಲಾಮಿನ ದೇಹ ಇದೊಂದೇ ನಮ್ಮ ಪುರೋಗಮನಕ್ಕೆ ಹಾದಿ” (ಪುಟ 60) ಎನ್ನುತ್ತಾರೆ. “ಒಬ್ಬನು ಮಹಮ್ಮದೀಯನಾದ ತಕ್ಷಣ ಇಡೀ ಇಸ್ಲಾಂ ಪ್ರಪಂಚ ಅವನನ್ನು ತಮ್ಮ ಸಹೋದರನಂತೆ ಯಾವ ವ್ಯತ್ಯಾಸವನ್ನೂ ಮಾಡದೆ ಸ್ವೀಕರಿಸುವುದು. ಮತ್ತಾವ ಧರ್ಮವೂ ಹೀಗೆ ಮಾಡಲಾರದು” (ಪುಟ 65) ಎನ್ನುತ್ತಾರೆ. “ಭರತಖಂಡದಲ್ಲಿ ಮಹಮ್ಮದೀಯರ ವಿಜಯ ದೀನರಿಗೆ ದುರ್ಬಲರಿಗೆ ಮುಕ್ತಿಯಂತೆ ಬಂತು” (ಪುಟ 76) ಎಂದು ಹೇಳುತ್ತಾರೆ. 


-ತ. ನಂ. ಜ್ಞಾನೇಶ್ವರ

Sunday, March 20, 2016

‘ಲಂಕೇಶ್ ಹೇಗಿದ್ದರು!?’



ನಾನು ಇತ್ತೀಚೆಗೆ ಡಾ. ಹಾಲತಿ ಸೋಮಶೇಖರ್ ಅವರ ‘ಲಂಕೇಶ್ ಹೇಗಿದ್ದರು!?’ ಪುಸ್ತಕ ಓದಿದೆ. ಪುಸ್ತಕದ ಶೀರ್ಷಿಕೆಯು ಆಶ್ಚರ್ಯಸೂಚಕ ಹಾಗೂ ಪ್ರಶ್ನಾರ್ಥಕ ಚಿಹ್ನೆಗಳೆರಡನ್ನೂ ಹೊಂದಿದೆ. ಪಿಎಚ್.ಡಿ. ಪದವಿಗಾಗಿ ಲಂಕೇಶ್ ಅವರ ಸಾಹಿತ್ಯದ ಬಗ್ಗೆ ಅಧ್ಯಯನ ಮಾಡಿದ ಸೋಮಶೇಖರ್ ಅವರು ಲಂಕೇಶ್ ಅವರ ವ್ಯಕ್ತಿತ್ವದ ನಾನಾ ಬಣ್ಣಗಳನ್ನು ಕಂಡರು. ಲಂಕೇಶರ ಬಗ್ಗೆ ಅವರನ್ನು ಬಲ್ಲವರು ಬರೆದಿರುವ ಮಾತುಗಳ ಜೊತೆಗೆ ಲಂಕೇಶ್ ಅವರೇ ಬರೆದುಕೊಂಡ ಮಾತುಗಳನ್ನೂ ಸೇರಿಸಿ ಈ ಪುಸ್ತಕ ರಚಿಸಿದ್ದಾರೆ. ಇದಕ್ಕಾಗಿ ಅವರು 39 ಪತ್ರಿಕೆ, ಪುಸ್ತಕಗಳನ್ನು ಪರಾಮರ್ಶಿಸಿದ್ದಾರೆ. ಅಲ್ಲಲ್ಲೇ ಅವುಗಳ ಉಲ್ಲೇಖಗಳನ್ನೂ ಕೊಟ್ಟಿದ್ದಾರೆ. ಹೀಗಾಗಿ ಈ ಕೃತಿಗೆ ಒಂದು ಅಧಿಕೃತತೆ ಬಂದಿದೆ. ಕನ್ನಡದಲ್ಲಿ ಇದು ಈ ಬಗೆಯ ಮೊದಲ ಕೃತಿ.
ಈ ಕೃತಿಯು ‘ಲಂಕೇಶ್ – ಹೀಗಿದ್ದರು!’, ‘ಲಂಕೇಶ್ – ಹೀಗೂ ಇದ್ದರು!!’, ‘ಲಂಕೇಶ್ – ಹೀಗಿದ್ದರೆ?’, ‘ಲಂಕೇಶ್ – ಹೀಗಿರಲಿಲ್ಲ!’ ಹಾಗೂ ‘ಸಾರ್ವಕಾಲಿಕ ಲಂಕೇಶ್: ಸಮಕಾಲೀನರೊಂದಿಗೆ’ ಎಂಬ ನಾಲ್ಕು ಭಾಗಗಳಲ್ಲಿ ಹರಡಿಕೊಂಡಿದ್ದು ಎರಡು ಅನುಬಂಧಗಳನ್ನೂ ಒಳಗೊಂಡಿದೆ. ಲಂಕೇಶ್ ಸಮಕಾಲೀನರಾದ ಚಂದ್ರಶೇಖರ ಪಾಟೀಲರು ಮುನ್ನುಡಿ ಬರೆದಿದ್ದಾರೆ.
ಪುಸ್ತಕವು ಲಂಕೇಶ್ ಅವರ ವರ್ಣರಂಜಿತ ಸಂಕೀರ್ಣ ವ್ಯಕ್ತಿತ್ವವನ್ನು ಬಿಚ್ಚಿಟ್ಟಿದೆ. ಕೃತಿಯನ್ನು ಓದುವಾಗ ಇಂಗ್ಲಿಷ್ ಕವಿಯೊಬ್ಬನ ಬಗ್ಗೆ ಓದಿದಂತೆ ಭಾಸವಾಗುತ್ತದೆ. ಕನ್ನಡದ ಪರಿಸರದಲ್ಲಿ ಇಷ್ಟು ವರ್ಣರಂಜಿತ ವ್ಯಕ್ತಿತ್ವದ ಇನ್ನೊಬ್ಬ ಸಾಹಿತಿಯನ್ನು ಕಾಣುವುದು ಸಾಧ್ಯವಿಲ್ಲ. ಲಂಕೇಶ್ ಅವರ ಭ್ರಮೆಗಳು, ತಿಕ್ಕಲುತನಗಳು, ಒರಟುತನ, ಅಸೂಯೆ, ಅಹಂಕಾರ, ಕೋಪ, ಪ್ರಾಮಾಣಿಕತೆ, ಸಹಲೇಖಕರೊಂದಿಗಿನ ಅವರ ರಾಗದ್ವೇಷಗಳು ಇವನ್ನೆಲ್ಲ ರಂಜಕವಾಗಿ ನಿರೂಪಿಸಿದ್ದಾರೆ ಹಾಲತಿ ಸೋಮಶೇಖರ್. ಲಂಕೇಶ್ ಅವರ ದ್ವಂದ್ವ ವ್ಯಕ್ತಿತ್ವವನ್ನು ಈ ಕೃತಿ ಅನಾವರಣಗೊಳಿಸಿದೆ.
“ಲಂಕೇಶ್ ಒರಟು ನಡೆಯ ಹಿಂದಿನ ಪ್ರಾಮಾಣಿಕತೆಯನ್ನು ಗುರುತಿಸುವ ಕೆಲಸವನ್ನು” ಹಾಲತಿ ಸೋಮಶೇಖರ್ ಮಾಡಿದ್ದಾರೆಂದು ಎಸ್.ಜಿ. ಸಿದ್ಧರಾಮಯ್ಯನವರು ನುಡಿಯುತ್ತಾರೆ. “ಲಂಕೇಶ್ ಬಗ್ಗೆ ಎಲ್ಲಾ ವಿಧದ ಪ್ರೀತಿ ಗೌರವಗಳನ್ನು ಇಟ್ಟುಕೊಂಡು ಅವರ ಮೇಲೆ ಅಷ್ಟೇ ನಿರ್ಮಮಕಾರವನ್ನು ತಾಳಿರುವುದರಿಂದ ಹಾಲತಿ ಅವರ ವಸ್ತುನಿಷ್ಠತೆ ಮೇಲುಗೈ ಸಾಧಿಸಿದೆ” ಎಂದು ಪ್ರೊ. ಕೆ. ಎಸ್. ಭಗವಾನ್ ಹೇಳುತ್ತಾರೆ. ಪ್ರಾಸಂಗಿಕವಾಗಿ ಬಂದ ಈ ಕೃತಿಯನ್ನು ಸ್ವಾಗತಿಸಿದ ಪ್ರೊ. ಎಂ. ಕೃಷ್ಣೇಗೌಡರು “ಸಾಹಿತಿಗಳ ಕಪ್ಪು ಬಿಳಿ ಮುಖಗಳನ್ನು ಅನಾವರಣ ಮಾಡುವುದರಲ್ಲೇ ಸೋಮಶೇಖರ್ ಅವರ ಸಮಯ, ಶಕ್ತಿ, ಪ್ರತಿಭೆ ವ್ಯಯವಾಗಬಾರದು” ಎಂಬ ಎಚ್ಚರಿಕೆಯನ್ನೂ ಕೊಡುತ್ತಾರೆ.
2015ರಲ್ಲಿ ಮೊದಲ ಮುದ್ರಣ ಕಂಡಿರುವ ಈ ಕೃತಿಯನ್ನು ಮೈಸೂರಿನ ವಿಸ್ಮಯ ಪ್ರಕಾಶನ ಪ್ರಕಟಿಸಿದೆ. 147+xx ಪುಟಗಳ ಈ ಕೃತಿಯ ಬೆಲೆ 160 ರೂಪಾಯಿಗಳು. ಮುಖಪುಟ ಷ್ಟೊಂದು ಆಕರ್ಷಕವಾಗಿಲ್ಲ.

- ತ. ನಂ. ಜ್ಞಾನೇಶ್ವರ

Saturday, November 28, 2015

ಕನಕದಾಸರು

ಕನಕದಾಸರು ಹದಿನಾರನೇ ಶತಮಾನದಲ್ಲಿ ಬದುಕಿದ್ದ ಕೀರ್ತನಕಾರ, ಕವಿ ಹಾಗೂ ಹರಿದಾಸರು. ಶೂದ್ರವರ್ಗದಿಂದ ಬಂದ ಏಕೈಕ ಹರಿದಾಸರು.  ವ್ಯಾಸರಾಯರ ಶಿಷ್ಯರಾಗಿದ್ದ ಅವರು ಸುಮಾರು ನಾಲ್ಕುನೂರು ಕೀರ್ತನೆಗಳನ್ನೂ, ಐದು ಕಾವ್ಯಗಳನ್ನೂ ರಚಿಸಿರುವರು. ಅವರ ಕೀರ್ತನೆಗಳ ಅಂಕಿತ 'ಕಾಗಿನೆಲೆಯಾದಿಕೇಶವರಾಯ'. ಅವರು ರಚಿಸಿರುವ ಕಾವ್ಯಗಳೆಂದರೆ:
  1. ನಳಚರಿತ್ರೆ
  2. ಮೋಹನತರಂಗಿಣಿ
  3. ರಾಮಧಾನ್ಯಚರಿತೆ
  4. ಹರಿಭಕ್ತಿಸಾರ
  5. ನೃಸಿಂಹಸ್ತವ
ನಳಚರಿತ್ರೆ
ನಳಚರಿತ್ರೆಯು ನಳ ದಮಯಂತಿಯರ ಕಥೆಯನ್ನು ಹೊಂದಿದೆ.
ಮೋಹನತರಂಗಿಣಿ
ಮೋಹನತರಂಗಿಣಿಯು ಶಂಬರಾಸುರ ಹಾಗೂ ಬಾಣಾಸುರರ ಕಥೆಯನ್ನು ಹೊಂದಿದೆ. ಎರಡು ಕಥೆಗಳನ್ನು ಒಂದೇ ಕಾವ್ಯದಲ್ಲಿ ಹೇಳಿರುವುದು ವಿಶೇಷ.
ರಾಮಧಾನ್ಯಚರಿತೆ
 ಜಗಳ ಮಾಡಿಕೊಂಡ ರಾಗಿ ಮತ್ತು ಅಕ್ಕಿ ನ್ಯಾಯಕ್ಕಾಗಿ ರಾಮನ ಬಳಿ ಬರುತ್ತವೆ. ರಾಮ ಇಬ್ಬರನ್ನೂ ಸೆರೆಗೆ ತಳ್ಳುತ್ತಾನೆ. ಸ್ವಲ್ಪ ಕಾಲದ ನಂತರ ರಾಗಿ ಆರೋಗ್ಯವಾಗಿದ್ದರೆ, ಅಕ್ಕಿ ಮುಗ್ಗಿರುತ್ತದೆ. ಆರೋಗ್ಯವಾಗಿದ್ದ ರಾಗಿ 'ರಾಮಧಾನ್ಯ' ಎನಿಸಿಕೊಳ್ಳುತ್ತದೆ. ಇಲ್ಲಿ ರಾಗಿ ಬಡವರ ಪ್ರತಿನಿಧಿಯಾಗಿಯೂ, ಅಕ್ಕಿ ಶ್ರೀಮಂತರ ಪ್ರತಿನಿಧಿಯಾಗಿಯೂ ಬಂದಿದೆ.
ಹರಿಭಕ್ತಿಸಾರ
ಇದೊಂದು ಶತಕ. 110 ಪದ್ಯಗಳಿವೆ. ಭಾಮಿನೀ ಷಟ್ಪದಿಯಲ್ಲಿರುವ ಈ ಪದ್ಯಗಳು 'ರಕ್ಷಿಸು ನಮ್ಮನನವರತ' ೆಂದು ಕೊನೆಗೊಳ್ಳುತ್ತವೆ.
ನೃಸಿಂಹಸ್ತವ
ಈ ಕೃತಿ ಉಪಲಬ್ಧವಿಲ್ಲ.
 ಕನಕದಾಸ ಜಯಂತಿ
ಕರ್ನಾಟಕ ಸರ್ಕಾರವು 2008ರಿಂದ 'ಕನಕದಾಸ ಜಯಂತಿ' ಆಚರಿಸುತ್ತಿದೆ.
ಪ್ರಶಸ್ತಿ
ಕರ್ನಾಟಕ ಸರ್ಕಾರವು ಪ್ರತಿವರ್ಷ 'ಕನಕಶ್ರೀ' ಪ್ರಶಸ್ತಿ ನೀಡುತ್ತಿದೆ.

Saturday, April 11, 2015

ನೀವು ಓದಲೇಬೇಕಾದ ಕನ್ನಡ ಕೃತಿಗಳು

  1. ಶ್ರೀರಾಮಾಯಣದರ್ಶನಂ - ಕುವೆಂಪು
  2. ಶೂದ್ರ ತಪಸ್ವಿ - ಕುವೆಂಪು 
  3. ಕಾನೂರು ಹೆಗ್ಗಡತಿ - ಕುವೆಂಪು
  4. ವಿಭೂತಿ ಪೂಜೆ - ಕುವೆಂಪು
  5. ಮಂಕುತಿಮ್ಮನ ಕಗ್ಗ - ಡಿವಿಜಿ
  6. ಮರುಳಮುನಿಯನ ಕಗ್ಗ - ಡಿವಿಜಿ
  7. ಜ್ಞಾಪಕ ಚಿತ್ರಶಾಲೆ - ಡಿವಿಜಿ
  8. ಸ್ವಾಮಿ ವಿವೇಕಾನಂದ - ಕುವೆಂಪು 
  9. ರಾಮಕೃಷ್ಣ ಪರಮಹಂಸ - ಕುವೆಂಪು 
  10. ಮೂಕಜ್ಜಿಯ ಕನಸುಗಳು - ಶಿವರಾಮ ಕಾರಂತ 
  11. ಪರಿಸರದ ಕಥೆ - ಪೂರ್ಣಚಂದ್ರ ತೇಜಸ್ವಿ 
  12. ಹಸುರು ಹೊನ್ನು - ಬಿ ಜಿ ಎಲ್ ಸ್ವಾಮಿ
  13. ನಮ್ಮ ಹೊಟ್ಟೆಯಲ್ಲಿ ದಕ್ಷಿಣ ಅಮೆರಿಕಾ - ಬಿ ಜಿ ಎಲ್ ಸ್ವಾಮಿ
  14. ನನ್ನ ಗೋಪಾಲ - ಕುವೆಂಪು 
  15. ಬೊಮ್ಮನಹಳ್ಳಿಯ ಕಿಂದರಿಜೋಗಿ - ಕುವೆಂಪು 
  16. ಕರ್ವಾಲೋ -  ಪೂರ್ಣಚಂದ್ರ ತೇಜಸ್ವಿ 
  17. ಮಿಲನಿಯಂ ಸರಣಿ - ಪೂರ್ಣಚಂದ್ರ ತೇಜಸ್ವಿ
  18. ಬದುಕಲು ಕಲಿಯಿರಿ - ಸ್ವಾಮಿ ಜಗದಾತ್ಮಾನಂದ 
  19. ಸ್ವಾಮಿ ವಿವೇಕಾನಂದರ ಸಮಗ್ರ ಜೀವನ ಚರಿತೆ - ಸ್ವಾಮಿ ಪುರುಷೋತ್ತಮಾನಂದ 
  20. ಯುಗಾವತಾರ ಶ್ರೀ ರಾಮಕೃಷ್ಣ - ಸ್ವಾಮಿ ಪುರುಷೋತ್ತಮಾನಂದ 
  21. ಶ್ರೀ ಶಾರದಾದೇವೀ ಜೀವನಗಂಗಾ  - ಸ್ವಾಮಿ ಪುರುಷೋತ್ತಮಾನಂದ 
  22. ರಾಮಕೃಷ್ಣ ವಚನವೇದ - ಮಹೇಂದ್ರನಾಥ ಗುಪ್ತ 
  23. ಸ್ವಾಮಿ ವಿವೇಕಾನಂದರ ಕೃತಿಶ್ರೇಣಿ
  24. ತಲೆದಂಡ - ಗಿರೀಶ್ ಕಾರ್ನಾಡ್
  25. ಸಂಕ್ರಾಂತಿ - ಪಿ ಲಂಕೇಶ್
  26. ಗುಣಮುಖ - ಪಿ ಲಂಕೇಶ್
  27. ವಚನ ಭಾರತ - ಎ ಆರ್ ಕೃಷ್ಣಶಾಸ್ತ್ರೀ
  28. ಡುಂಢಿ - ಯೋಗೇಶ್ ಮಾಸ್ಟರ್
  29. ಜನಪ್ರಿಯ ವಾಲ್ಮೀಕಿ ರಾಮಾಯಣ - ಕುವೆಂಪು
  30. ರಾಮಾಯಣ ವಿಷವೃಕ್ಷ - ಬಂಜಗೆರೆ ಜಯಪ್ರಕಾಶ್
  31. ರಾಮನಿಗೆ ಸೀತೆ ಏನಾಗಬೇಕು - ಡಾ. ಆರುದ್ರ
  32. ಇತಿಹಾಸದ ಕಣ್ಣಲ್ಲಿ ರಾಮಾಯಣ - ಎಚ್ ಡಿ ಸಂಕಾಲಿಯಾ
  33. ವಾಲ್ಮೀಕಿ ತೂಕಡಿಸಿದಾಗ - ಗೌರೀಶ ಕಾಯ್ಕಿಣಿ
  34. ದೇವರು - ಎ.ಎನ್. ಮೂರ್ತಿರಾವ್
  35. ಶಂಕರಾಚಾರ್ಯ ಮತ್ತು ಪ್ರತಿಗಾಮಿತನ - ಕೆ ಎಸ್ ಭಗವಾನ್
  36. ವಿವೇಕಾನಂದರ ಕ್ರಾಂತಿಕಾರಿ ವಿಚಾರಗಳು - ಜ ಹೊ ನಾರಾಯಣಸ್ವಾಮಿ
  37. ದಾಂಪತ್ಯ ದೀಪಿಕೆ - ಅನುಪಮಾ ನಿರಂಜನ
  38. ಕೇಳು ಕಿಶೋರಿ - ಅನುಪಮಾ ನಿರಂಜನ
  39. ವಧುವಿಗೆ ಕಿವಿಮಾತು - ಅನುಪಮಾ ನಿರಂಜನ
  40.  ತಾಯಿ ಮಗು - ಅನುಪಮಾ ನಿರಂಜನ
  41. ದಿ ಲಾಸ್ಟ್ ಲೆಕ್ಚರ್ - ರ್ಯಾಂಡಿ  ಪಾಶ್ (ಅನು: ಎಸ್. ಉಮೇಶ್)

Thursday, January 1, 2015

ಮಾತೇ ಮುತ್ತು

ಮಾತು ಬೆಳ್ಳಿ; ಮೌನ ಬಂಗಾರ.
ಮಾತು ಮನೆ ಕೆಡಿಸಿತು; ತೂತು  ಒಲೆ ಕೆಡಿಸಿತು.
ಮಾತು ಆಡಿದರೆ ಹೋಯಿತು; ಮುತ್ತು ಒಡೆದರೆ ಹೋಯಿತು.
ಮಾತೇ ಮುತ್ತು; ಮಾತೇ ಮೃತ್ಯು.
ನುಡಿದರೆ ಮುತ್ತಿನ ಹಾರದಂತಿರಬೇಕು
ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು
ನುಡಿ ಜ್ಯೋತಿರ್ಲಿಂಗ
ಮೌನ ಮೊಗ್ಗೆಯನೊಡೆದು ಮಾತರಳಿ ಬರಲಿ
ಮೃದುವಚನ ಮೂಲೋಕ ಗೆಲ್ಲುವುದು ಗೆಳೆಯಾ
ಮೃದುವಚನವೇ ಸಕಲ ಜಪಂಗಳಯ್ಯಾ
ಮೃದುವಚನವೇ ಸಕಲ ತಪಂಗಳಯ್ಯಾ
ರಸಿಕನಾಡಿದ ಮಾತು ಶಶಿಯುದಿಸಿ ಬಂದಂತೆ
ರಸಿಕನಲ್ಲದವನ ಬರಿಮಾತು ಕೂರ್ದಸಿಯ ಬಡಿದಂತೆ
ಮಾತು ಮಾತು ಮಥಿಸಿ ಬಂದ ನಾದದ ನವನೀತ

Thursday, November 6, 2014

ಕುಲಕುಲಕುಲವೆಂದು ಹೊಡೆದಾಡದಿರಿ

ಕುಲಕುಲಕುಲವೆಂದು ಹೊಡೆದಾಡದಿರಿ
ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಬಲ್ಲಿರಾ

ಹುಟ್ಟದ ಯೋನಿಗಳಿಲ್ಲ ಮೆಟ್ಟದ ಭೂಮಿಗಳಿಲ್ಲ
ಅಟ್ಟು ಉಣ್ಣದ ವಸ್ತುಗಳಿಲ್ಲ
ಗುಟ್ಟು ಕಾಣಿಸಬಂತು ಹಿರಿದೇನು ಕಿರಿದೇನು
ನೆಟ್ಟನೆ ಸರ್ವಜ್ಞನ ನೆಲೆ ಕಂಡ್ಯ ಮನುಜ

ಜಲವೆ ಸಕಲ ಕುಲಕ್ಕೆ ತಾಯಲ್ಲವೆ
ಜಲದ ಕುಲವನೇನಾದರೂ ಬಲ್ಲಿರಾ
ಜಲದ ಬೊಬ್ಬುಳಿಯಂತೆ ಸ್ಥಿರವಲ್ಲವೀ ದೇಹ
ನೆಲೆಯ ಅರಿತು ನೀ ನೆನೆ ಕಂಡ್ಯ ಮನುಜ

ಹರಿಯೇ ಸರ್ವೋತ್ತಮ ಹರಿಯೇ ಸರ್ವೇಶ್ವರ
ಹರಿಮಯವೆಲ್ಲವೆನುತ ತಿಳಿದು
ಸಿರಿಕಾಗಿನೆಲೆಯಾದಿಕೇಶವರಾಯನ
ಚರಣಕಮಲವ ಕೀರ್ತಿಸುವನೆ ಕುಲಜ

- ಕನಕದಾಸರು 

Saturday, July 12, 2014

ಗೊರೂರು ರಾಮಸ್ವಾಮಿ ಅಯ್ಯಂಗಾರ್

ಪತ್ನಿ ಶೇಷಮ್ಮ ಅವರೊಂದಿಗೆ ಗೊರೂರು ರಾಮಸ್ವಾಮಿ ಅಯ್ಯಂಗಾರ್
ಕನ್ನಡದ ಪ್ರಮುಖ ಸಾಹಿತಿಗಳಲ್ಲಿ ಒಬ್ಬರಾದ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಹಾಸನ ಜಿಲ್ಲೆಯ ಗೊರೂರಿನಲ್ಲಿ1904ರಲ್ಲಿ ಜನಿಸಿದರು. ತಂದೆ ಶ್ರೀನಿವಾಸ ಅಯ್ಯಂಗಾರ್; ತಾಯಿ ಲಕ್ಷ್ಮಮ್ಮ. ಅವರು ಎಂ.ಎ. ಪರೀಕ್ಷೆ ತೆಗೆದುಕೊಂಡಾಗ ಅವರೇ ರಚಿಸಿದ 'ನಮ್ಮ ಊರಿನ ರಸಿಕರು' ಕೃತಿ ಪಠ್ಯವಾಗಿತ್ತು. ಮಹಾತ್ಮ ಗಾಂಧೀಜಿಯವರ ಆತ್ಮಕಥೆಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. 'ಅಮೆರಿಕದಲ್ಲಿ ಗೊರೂರು' ಅವರ ಪ್ರವಾಸಕಥನ. ಲಲಿತ ಪ್ರಬಂಧಗಳನ್ನೂ ಬರೆದಿದ್ದಾರೆ. 60ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.